ಸಾರಾಂಶ
ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಹೊಸದಾಗಿ ನಾಲ್ಕು ತರಕಾರಿ, ದಿನಸಿ ಸಗಟು ಮಾರುಕಟ್ಟೆ ನಿರ್ಮಿಸುವ ಯೋಜನೆ ಇನ್ನೂ ಕಡತದಲ್ಲೇ ಉಳಿದುಕೊಂಡಿದೆ. ಇದರಿಂದ ನಗರದ ಒಳಗಿರುವ ಮಾರುಕಟ್ಟೆ ಮೇಲಿನ ಒತ್ತಡ ನಿವಾರಣೆ, ಸಂಚಾರ ದಟ್ಟಣೆ ನಿವಾರಿಸುವ ಚಿಂತನೆ ಕಾರ್ಯ ರೂಪಕ್ಕೆ ಬಂದಿಲ್ಲ
ಮಯೂರ್ ಹೆಗಡೆ
ಬೆಂಗಳೂರು : ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಹೊಸದಾಗಿ ನಾಲ್ಕು ತರಕಾರಿ, ದಿನಸಿ ಸಗಟು ಮಾರುಕಟ್ಟೆ ನಿರ್ಮಿಸುವ ಯೋಜನೆ ಇನ್ನೂ ಕಡತದಲ್ಲೇ ಉಳಿದುಕೊಂಡಿದೆ. ಇದರಿಂದ ನಗರದ ಒಳಗಿರುವ ಮಾರುಕಟ್ಟೆ ಮೇಲಿನ ಒತ್ತಡ ನಿವಾರಣೆ, ಸಂಚಾರ ದಟ್ಟಣೆ ನಿವಾರಿಸುವ ಚಿಂತನೆ ಕಾರ್ಯ ರೂಪಕ್ಕೆ ಬಂದಿಲ್ಲ.
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ, ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆ ಹಾಗೂ ಕೆ.ಆರ್.ಮಾರುಕಟ್ಟೆ ಮೇಲಿನ ವಿಪರೀತ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೊಸದಾಗಿ ನಾಲ್ಕು ಬೃಹತ್ ಮಾರುಕಟ್ಟೆ ನಿರ್ಮಿಸಲು ಮುಂದಾಗಿತ್ತು. ಈ ಸಂಬಂಧ ಒಂದೆರಡು ಕಡೆ ಭೂಸ್ವಾದೀನ ಪ್ರಕ್ರಿಯೆ ನಡೆಸಿದ್ದು ಬಿಟ್ಟರೆ ಮುಂದೆ ಯಾವುದೇ ಬೆಳವಣಿಗೆ ಆಗದೆ ನಾಲ್ಕೂ ಯೋಜನೆಗಳು ನಿಂತಲ್ಲೇ ನಿಂತಿವೆ.
ಬೆಂಗಳೂರು ಪೂರ್ವಕ್ಕೆ ಸಿಂಗೇನ ಅಗ್ರಹಾರ, ಪಶ್ಚಿಮದಲ್ಲಿ ದಾಸನಪುರ, ಉತ್ತರದಲ್ಲಿ ಬ್ಯಾಟರಾಯಪುರ ಹಾಗೂ ದಕ್ಷಿಣದಲ್ಲಿ ಮೈಸೂರು ರಸ್ತೆ ಕೆಂಗೇರಿ ಬಳಿ ಮಾರುಕಟ್ಟೆ ನಿರ್ಮಿಸಲು ತೀರ್ಮಾನವಾಗಿತ್ತು. ಈ ಪೈಕಿ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಪರ್ಯಾಯವಾಗಿ ದಾಸನಪುರ ಮಾರುಕಟ್ಟೆ ನಿರ್ಮಿಸಿದ್ದರೂ ಅಲ್ಲಿ ಅಗತ್ಯ ಮೂಲಭೂತ ಸೌಕರ್ಯ ಮಾರುಕಟ್ಟೆ ಸಂಕಿರ್ಣಗಳ ನಡುವೆ ಸಂಪರ್ಕ ಸೇರಿ ಇತರೆ ಸಮಸ್ಯೆಗಳಿವೆ. ಹೀಗಾಗಿ ಅಲ್ಲಿಗೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿರುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ. ಇದರಿಂದ ಸಂಕಿರ್ಣಗಳ ಮಳಿಗೆಗಳು ವ್ಯಾಪಾರಿಗಳಿಲ್ಲದೆ ಬಣಗುಟ್ಟುತ್ತಿವೆ.ಇನ್ನು ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಿಸಲು ಸಿಂಗೇನ ಅಗ್ರಹಾರ ಬಳಿಯ ಗೂಳಿಮಂಗಲದಲ್ಲಿ 2022ರಲ್ಲೇ ಸ್ಥಳ ಗುರುತಿಸಲಾಗಿತ್ತು. ಇಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ₹100 ಕೋಟಿ ಅನುದಾನ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬಳಿಕ ₹48 ಕೋಟಿ ಪಾವತಿಸಿ 42 ಎಕರೆ 31 ಗುಂಟೆ ಪ್ರದೇಶ ಭೂಸ್ವಾದೀನ ಮಾಡಿಕೊಳ್ಳಲಾಗಿದೆ. ₹52 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಮೀಸಲಾಗಿದೆ. ಆದರೆ, ಬಳಿಕ ಭೂಮಾಲೀಕರು ಸ್ವಾದೀನ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬ್ಯಾಟರಾಯನಪುರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ 1998ರಲ್ಲೇ ಸುಮಾರು 30 ಎಕರೆ ಭೂಸ್ವಾದೀನ ಆಗಿದೆ. ಆದರೆ, ಖಾಸಗೀ-ಸರ್ಕಾರಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಖಾಸಗಿಯವರು ತಗಾದೆ ತೆಗೆದಿದ್ದರಿಂದ ಈ ವಿಚಾರವೂ ಮುಂದುವರಿದಿಲ್ಲ. ಇನ್ನು ಮೈಸೂರು ರಸ್ತೆ ಕೆಂಗೇರಿ ಬಳಿ ಹೊಸ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಿದ್ದರೂ ಇನ್ನೂ ಸ್ಥಳ ಗುರುತಿಸಿಕೊಳ್ಳಲಾಗಿಲ್ಲ.
ಸದ್ಯ ಎರಡೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಾಹನಗಳ ಓಡಾಟವೇ ದೊಡ್ಡ ತಲೆನೋವಾಗಿದೆ. ಯಶವಂತಪುರಕ್ಕೆ ಪ್ರತಿದಿನ ಕನಿಷ್ಠ 800-1500ಕ್ಕೂ ಹೆಚ್ಚು ಸರಕು ತುಂಬಿದ ಲಾರಿ, ಮಿನಿ ವಾಹನಗಳು ಓಡಾಡುತ್ತವೆ. ಕಲಾಸಿಪಾಳ್ಯಕ್ಕೂ ತರಕಾರಿ ಹೊತ್ತ ನೂರಾರು ವಾಹನಗಳು ಸುತ್ತಮುತ್ತಲ ಜಿಲ್ಲೆ, ನೆರೆರಾಜ್ಯಗಳಿಂದ ಬರುತ್ತವೆ. ಹಗಲು ಹೊತ್ತಲ್ಲಿ ಮಾರುಕಟ್ಟೆಯೊಳಕ್ಕೆ ಈ ವಾಹನಗಳ ಪ್ರವೇಶ ನಿರ್ಬಂಧಿಸಿ ರಾತ್ರಿ, ನಸುಕಿನ ವೇಳೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಇವುಗಳಿಂದ ಮಾರುಕಟ್ಟೆಯೊಳಗೆ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಸಮಸ್ಯೆ ತಪ್ಪಿಲ್ಲ.
ಜತೆಗೆ ಬೆಂಗಳೂರು ಸುತ್ತಮುತ್ತಲ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಆಂದ್ರ, ತಮಿಳುನಾಡು ಕಡೆಯಿಂದ ಬರುವ ತರಕಾರಿ, ಹೂವು, ಹಣ್ಣು ತರುವ ರೈತರೆಲ್ಲರೂ ಇವೆರಡು ಮಾರುಕಟ್ಟೆಯನ್ನು ಮಾತ್ರ ಅವಲಂಬಿಸಿದ್ದು, ಇಲ್ಲಿಗೆ ಮಾತ್ರ ಸರಕನ್ನು ತರುವ ಅನಿವಾರ್ಯತೆ ಇದೆ. ನಾಲ್ಕು ಕಡೆಗಳಲ್ಲಿ ಮಾರುಕಟ್ಟೆ ನಿರ್ಮಾಣ ಆದಲ್ಲಿ ರೈತರು, ವರ್ತಕರು ನಗರದೊಳಗೆ ಪ್ರವೇಶಿಸುವುದು ಕಡಿಮೆ ಆಗಲಿದೆ. ಎಪಿಎಂಸಿ ಕೆಲವೇ ವ್ಯಾಪಾರಿಗಳ ಸ್ವಾಮ್ಯತೆ ತಪ್ಪಲಿದ್ದು, ದರ ಸೇರಿದಂತೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ನಗರದ ಚಿಲ್ಲರೆ ಮಾರುಕಟ್ಟೆ ವ್ಯಾಪಾರಸ್ಥರು, ಗ್ರಾಹಕರೂ ಇಲ್ಲಿಗೇ ಬಂದು ಖರೀದಿಸುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಮೂರ್ನಾಲ್ಕು ತಿಂಗಳಲ್ಲಿ ಇತ್ಯರ್ಥ?
ಸಿಂಗೇನ ಅಗ್ರಹಾರ, ದಾಸನಪುರ, ಬ್ಯಾಟರಾಯನಪುರ ಮಾರುಕಟ್ಟೆ ಅಭಿವೃದ್ಧಿ ವಿಚಾರ ಹಾಗೂ ಭೂಸ್ವಾದೀನ ಪ್ರಕ್ರಿಯೆ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ ಯೋಜನೆ ವಿಳಂಬವಾಗಿದೆ. ಕೋರ್ಟ್‌ನಲ್ಲಿರುವ ಎಲ್ಲ ವಿಚಾರಣೆಗಳು ಕೊನೆ ಹಂತದಲ್ಲಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ. ಬಳಿಕ ಈ ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ಎಪಿಎಂಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.