ಫಲಪುಷ್ಪ ಪ್ರದರ್ಶನಕ್ಕೆ ಒಂದೂವರೆ ಲಕ್ಷ ಮಂದಿ ಭೇಟಿ - ಟಿಕೆಟ್ ಮಾರಾಟದಿಂದ 75 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ

| Published : Jan 23 2025, 06:21 AM IST

Lalbagh Flower Show

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈವರೆಗೆ 1.50ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ.

ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈವರೆಗೆ 1.50ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ.

ಕಳೆದ ಒಂದು ವಾರದಿಂದ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ 1.50 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದು ಟಿಕೆಟ್ ಮಾರಾಟದಿಂದ 75 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಪ್ರದರ್ಶನ ಜ.27ರಂದು ಸಂಜೆ ಮುಕ್ತಾಯವಾಗಲಿದೆ. ಮುಂದಿನ ಐದು ದಿನಗಳಲ್ಲಿ ಇನ್ನೂ 3ರಿಂದ 5 ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ತಾಜಾ ಪುಷ್ಪಗಳ ಆಕರ್ಷಣೆ:

ಗಾಜಿನಮನೆಯ ಕೇಂದ್ರಭಾಗದ ಎಡಭಾಗದಲ್ಲಿ ನೇಪಾಳದ ಚಿತ್ವಾನ್‌ ನ್ಯಾಷನಲ್‌ ಪಾರ್ಕ್‌ದಲ್ಲಿ ತಮಸಾ, ಸೋನಾ ಮತ್ತು ಗಂಡಕಿ ನದಿಗಳ ತ್ರಿವೇಣಿ ಸಂಗಮದ ವಾಲ್ಮೀಕಿ ಆಶ್ರಮದಲ್ಲಿರುವ ವಾಲ್ಮೀಕಿ ದೇವಾಲಯದ ಪುಷ್ಪ ಮಾದರಿ ಪ್ರದರ್ಶನಗೊಳ್ಳುತ್ತಿದೆ. ಈ ಆಶ್ರಮದ ಪ್ರತಿರೂಪವು ಒಟ್ಟು 14 ಅಡಿ ಅಗಲ ಮತ್ತು 24 ಅಡಿ ಎತ್ತರವನ್ನುಹೊಂದಿದೆ. ಈ ಪ್ರತಿರೂಪಕ್ಕೆ ಈ ಹಿಂದೆ ಬಳಸಲಾದ ಹೂವುಗಳು ಬಾಡಿದ್ದು ಆಕರ್ಷಣೆ ಕಳೆದುಕೊಂಡ ಹಿನ್ನೆಲೆಯಲ್ಲಿ ಅವುಗಳನ್ನು ತೆರವುಗೊಳಿಸಲಾಗಿದ್ದು ಬುಧವಾರ ತಾಜಾ ಹೂವುಗಳ ಜೋಡಣೆ ಮಾಡಲಾಗಿದೆ.

ಕೆಂಪು ಮತ್ತು ಹಳದಿ ಬಣ್ಣದ ಒಟ್ಟು ಒಂದು ಲಕ್ಷ ಗುಲಾಬಿ ಹೂವುಗಳು ಹಾಗೂ ಶ್ವೇತ, ನೇರಳೆ, ಹಳದಿ ಮತ್ತು ಚಾಕ್ಲೇಟ್‌ ವರ್ಣದ ಒಟ್ಟು 1.75 ಲಕ್ಷ ಆಕರ್ಷಕ ಕಲ್ಕತ್ತಾ ಮತ್ತು ಸಾಮಾನ್ಯ ಸೇವಂತಿಗೆ ಹೂವುಗಳನ್ನು ಬಳಸಲಾಗಿದೆ. ಸುಮಾರು 2.75 ಲಕ್ಷಕ್ಕೂ ಹೆಚ್ಚು ಗುಲಾಬಿ ಮತ್ತು ಸೇವಂತಿಗೆ ಹೂವುಗಳನ್ನು ಬಳಕೆ ಮಾಡಲಾಗಿದೆ. ಇದರಿಂದಾಗಿ ಪುಷ್ಪ ಪ್ರದರ್ಶನಕ್ಕೆ ಇನ್ನಷ್ಟು ಮೆರಗು ಬಂದಿದೆ.

ಜಲಪಾತ ದರ್ಶನ:

ಲಾಲ್‌ಬಾಗ್‌ ಚಿಕ್ಕಕೆರೆಯ ಬಳಿ ಇರುವ ಆಕರ್ಷಕ ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 7ರಿಂದ 7.20, 8 ರಿಂದ 8.20, 11 ರಿಂದ 11.20. ಮಧ್ಯಾಹ್ನ 12 ರಿಂದ 12.20, 1ರಿಂದ 1.20, 2ರಿಂದ 2.20, 3 ರಿಂದ 3.20. ಸಂಜೆ 4 ರಿಂದ 4.20, 5 ರಿಂದ 5.20 ಹಾಗೂ 6 ರಿಂದ 6.20. ಈ ಅವಧಿಯಲ್ಲಿ ಜಲಪಾತದ ವೀಕ್ಷಣೆ ಮಾಡಬಹುದಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ

ಫಲಪುಷ್ಪ ಪ್ರದರ್ಶನಕ್ಕೆ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಒದಗಿಸಲಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಇರಬೇಕು. ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರವೇಶ ಉಚಿತವಿರಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.