ಸಾರಾಂಶ
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್‌ನಲ್ಲಿ ಆರಂಭಿಸುವ ಸಾಧ್ಯತೆ ಇರುವುದರಿಂದ ಸಮಯ, ವೇಳಾಪಟ್ಟಿ ರೂಪಿಸುವುದು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್‌ನಲ್ಲಿ ಆರಂಭಿಸುವ ಸಾಧ್ಯತೆ ಇರುವುದರಿಂದ ಸಮಯ, ವೇಳಾಪಟ್ಟಿ ರೂಪಿಸುವುದು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸವಾಲಾಗಿ ಪರಿಣಮಿಸಿದೆ.
ಐಟಿ ಹಬ್‌ಗೆ ಸಂಪರ್ಕಿಸುವ ಈ ಮಾರ್ಗ ಆರಂಭಕ್ಕೆ ಬಿಎಂಆರ್‌ಸಿಎಲ್ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ, ಇರುವ ಮೂರೇ ರೈಲುಗಳಿಂದ ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ 18.82 ಕಿಮೀ ಉದ್ದದ, 16 ನಿಲ್ದಾಣಗಳನ್ನು ಒಳಗೊಂಡ ಈ ಮಾರ್ಗಕ್ಕೆ ವ್ಯವಸ್ಥಿತ ಸಮಯ, ವೇಳಾಪಟ್ಟಿ ರೂಪಿಸಿಕೊಳ್ಳುವುದು ಬಿಎಂಆರ್‌ಸಿಎಲ್‌ಗೆ ತಲೆನೋವಾಗಿದೆ. ಎಲ್ಲ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸುತ್ತ ತೆರಳಿದರೆ ರೈಲುಗಳ ನಡುವೆ ಸುಮಾರು ಅರ್ಧಗಂಟೆ ಅಂತರ ಏರ್ಪಡುವ ಸಾಧ್ಯತೆಯಿದೆ. ಆದರೆ, ಹೊಸ ಮಾರ್ಗದ ಆದಾಯ, ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದ ಎರಡ್ಮೂರು ಮಾರ್ಗಸೂಚಿ ರೂಪಿಸಲಾಗಿದೆ.
7 ನಿಲ್ದಾಣಗಳಲ್ಲಿ ನಿಲುಗಡೆ:
ಹಳದಿ ಮಾರ್ಗದಲ್ಲಿ ಹೆಚ್ಚು ಜನ ಬಳಸಲಿರುವ 7 ನಿಲ್ದಾಣಗಳ ನಿಲುಗಡೆಯೊಂದಿಗೆ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ. ಆರ್‌ವಿ ರಸ್ತೆ, ಜಯದೇವ ಹಾಸ್ಪಿಟಲ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಕುಡ್ಲು ಗೇಟ್, ಹೊಸ ರೋಡ್, ಇನ್ಫೋಸಿಸ್ ಫೌಂಡೇಷನ್ ಕೋಣಪ್ಪನ ಅಗ್ರಹಾರ ಹಾಗೂ ಬೊಮ್ಮಸಂದ್ರ ನಿಲ್ದಾಣಗಳಲ್ಲಿ ನಿಲ್ಲಿಸಬಹುದು. ಇದರಿಂದ 20 ನಿಮಿಷಕ್ಕೊಮ್ಮೆ ರೈಲು ಓಡಾಡಲು ಸಾಧ್ಯವಾಗಲಿದೆ. ಇದರ ಜೊತೆಗೆ ಕೇವಲ ಅರ್ಧ ಮಾರ್ಗ ಮಾತ್ರ ಅಂದರೆ 12 ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಬೊಮ್ಮಸಂದ್ರ ದಿಂದ ಸಿಲ್ಕ್ ಬೋರ್ಡ್‌ವರೆಗೆ ಮಾತ್ರ ಸಂಚರಿಸುವ ಬಗ್ಗೆಯೂ ಬಿಎಂಆರ್‌ಸಿಎಲ್ ಯೋಜಿಸಿದೆ. ಹೀಗಾದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ, ಬಿಟಿಎಂ ಲೇಔಟ್ ನಿಲ್ದಾಣಗಳು ತಪ್ಪಲಿವೆ.
ಈ ಬಗ್ಗೆ ಮಾತನಾಡಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ಬಹುತೇಕ ಆಗಸ್ಟ್ ಅಂತ್ಯದಿಂದ ಈ ಮಾರ್ಗದ ವಾಣಿಜ್ಯ ಸಂಚಾರ ಆರಂಭಿಸಲು ಸಾಧ್ಯವಾಗಬಹುದು. ಅಕ್ಟೋಬರ್ ಅಂತ್ಯದ ಹೆಚ್ಚುವರಿ 5 ರೈಲುಗಳು ಸೇರ್ಪಡೆ ಆಗುವ ನಿರೀಕ್ಷೆಯಿದ್ದು, ಇದರಿಂದ ಸುಮಾರು 8-9 ನಿಮಿಷಕ್ಕೊಮ್ಮೆ ರೈಲು ಸಂಚರಿಸಲು ಅನುಕೂಲ ಆಗಲಿದೆ. ಆಗಸ್ಟ್ ಎರಡನೇ ವಾರದಲ್ಲಿ ತೀತಾಘರ್‌ನಿಂದ ಮತ್ತೊಂದು ರೈಲು ಬರುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.