ಸಾರಾಂಶ
ವರ್ಷದಿಂದ ವರ್ಷಕ್ಕೆ ರಾಜ್ಯದ ಜಲಾಶಯಗಳಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖ 8 ಜಲಾಶಯಗಳಲ್ಲಿ 1 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ಹೂಳು ತುಂಬಿದ್ದು, ಇದು ಜಲಾಶಯಗಳಲ್ಲಿ ನೀರಿನ ಶೇಖರಣೆ ಪ್ರಮಾಣಕ್ಕೆ ಹೊಡೆತ ಬೀಳುವಂತಾಗಿದೆ.
ಬೆಂಗಳೂರು : ವರ್ಷದಿಂದ ವರ್ಷಕ್ಕೆ ರಾಜ್ಯದ ಜಲಾಶಯಗಳಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖ 8 ಜಲಾಶಯಗಳಲ್ಲಿ 1 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ಹೂಳು ತುಂಬಿದ್ದು, ಇದು ಜಲಾಶಯಗಳಲ್ಲಿ ನೀರಿನ ಶೇಖರಣೆ ಪ್ರಮಾಣಕ್ಕೆ ಹೊಡೆತ ಬೀಳುವಂತಾಗಿದೆ.
ರಾಜ್ಯದಲ್ಲಿ ಒಟ್ಟಾರೆ 231 ಜಲಾಶಯಗಳಿವೆ. ಅವುಗಳಲ್ಲಿ ಪ್ರಮುಖ 14 ಜಲಾಶಯಗಳು ಹೆಚ್ಚಿನ ಪ್ರಮಾಣದ ಅಚ್ಚುಕಟ್ಟು ಪ್ರದೇಶಗಳನ್ನು ಹೊಂದಿವೆ. ಈ 14 ಜಲಾಶಯಗಳಲ್ಲಿ 8 ಜಲಾಶಯಗಳಲ್ಲಿ 1 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ಹೂಳು ಶೇಖರಣೆಯಾಗಿದೆ. ಅದರಲ್ಲೂ ತುಂಗಭದ್ರಾ ಜಲಾಶಯ ಒಂದರಲ್ಲೇ 2008ರಲ್ಲಿ ನಡೆದ ಸರ್ವೇಯಲ್ಲಿ 31.61 ಟಿಎಂಸಿ ಹೂಳು ಶೇಖರಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈಗ ಅಂದಾಜು 33 ಟಿಎಂಸಿಗೂ ಹೆಚ್ಚಿನ ಹೂಳು ಶೇಖರಣೆಯಾಗಿದೆ. ಹೀಗಾಗಿ ಜಲಾಶಯದ ಹೂಳು ತೆಗೆಯಲು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ.
ಉಳಿದಂತೆ ನಾರಾಯಣಪುರ/ಬಸವಸಾಗರದಲ್ಲಿ 2022ರಲ್ಲಿ ನಡೆಸಿದ ಸರ್ವೇಯಂತೆ 10.55 ಟಿಎಂಸಿ, ಆಲಮಟ್ಟಿಯಲ್ಲಿ 2023ರಲ್ಲಿ ನಡೆಸಿದ ಸರ್ವೇಯಂತೆ 7.55, ಕೃಷ್ಣರಾಜ ಸಾಗರದಲ್ಲಿ 2022ರಲ್ಲಿ ನಡೆಸಿದ ಸರ್ವೇಯಂತೆ 2.02, ಘಟಪ್ರಭಾದ ಹಿಡ್ಕಲ್ 2019ರಲ್ಲಿ ನಡೆಸಿದ ಸರ್ವೇಯಂತೆ 4.98 ಟಿಎಂಸಿ ಹೂಳು ಸಂಗ್ರಹವಾಗಿದೆ. ಹಾಗೆಯೇ, ಈ ಹಿಂದಿನ ಸರ್ವೇಗಳಂತೆ ಮಲಪ್ರಭ ಜಲಾಶಯದಲ್ಲಿ 1.08 ಟಿಎಂಸಿ, ಭದ್ರಾದಲ್ಲಿ 0.76, ಹಿಪ್ಪರಗಿ 0.12, ಕಬಿನಿ 1.04, ಹಾರಂಗಿ 1.23, ಹೇಮಾವತಿ 2.68, ವಾಣಿವಿಲಾಸ ಸಾಗರ 0.58, ವಾಟೆಹೊಳೆ 0.23 ಹಾಗೂ ಮಾರ್ಕೋಹಳ್ಳಿ ಜಲಾಶಯದಲ್ಲಿ 0.13 ಟಿಎಂಸಿ ಹೂಳು ಶೇಖರಣೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ದಾಖಲೆಗಳ ಮೂಲಕ ತಿಳಿದುಬಂದಿದೆ.
6ನೇ ಬಾರಿ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಭಾರಿ ಮಳೆಯಿಂದಾಗಿ ಸಂಪೂರ್ಣ ತುಂಬಿರುವ ಆಲಮಟ್ಟಿಯ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಶನಿವಾರ 6ನೇ ಬಾರಿ ಬಾಗಿನ ಅರ್ಪಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ ಸೇರಿ ಅನೇಕರಿದ್ದರು. ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಲು ಡ್ಯಾಂ ಹಿಂಬದಿ ಪ್ರತ್ಯೇಕ ಸ್ಥಳವಿದೆ. ಆದರೆ ಸಿಎಂಗೆ ಕಾಲುನೋವು ಇರುವ ಕಾರಣ ಸಂಪ್ರದಾಯ ಮುರಿದು ಅಣೆಕಟ್ಟೆ ಮೇಲೆ ತೆರಳಿ ಬಾಗಿನ ಅರ್ಪಿಸಲಾಯಿತು.
ಭೂಸ್ವಾಧೀನ ದರ
ಮುಂದಿನ ವಾರ ನಿಗದಿ
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಭೂಸ್ವಾಧೀನಕ್ಕೆ ಮುಂದಿನ ವಾರ ದರ ನಿಗದಿ ಮಾಡುತ್ತೇವೆ. ಡ್ಯಾಂ ಎತ್ತರವನ್ನು 519ರಿಂದ 524 ಮೀ.ಗೆ ಹೆಚ್ಚಿಸುವುದು ನಮ್ಮ ಸಂಕಲ್ಪ. ಇದರಿಂದ 6.6 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಸಿಗಲಿದೆ, ಇದರ ಅನುಮೋದನೆಗೆ ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ