ಸಾರಾಂಶ
ಸಾಗರ: ಲಿಂಗನಮಕ್ಕಿ ಜಲಾಶಯಕ್ಕೆ ಬಾಗಿನ ಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದು ಅರ್ಥವಿಲ್ಲದ ಮಾತು. ಎಲ್ಲರೂ ಒಂದಲ್ಲ ಒಂದು ದಿನ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕಿನ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶರಾವತಿಗೆ ಬಾಗಿನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಅತಿಹೆಚ್ಚು ವಿದ್ಯುತ್ ಪೂರೈಕೆ ಮಾಡುವ ಲಿಂಗನಮಕ್ಕಿ ಜಲಾಶಯ ತುಂಬಿರುವುದು ರಾಜ್ಯದಲ್ಲಿ ಮಳೆಬೆಳೆ ಸಮೃದ್ಧವಾಗಿ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ ಸಂದರ್ಭದಲ್ಲಿ ಹೆಚ್ಚು ಪರಿಸರ ನಾಶವಾಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ಯಶಸ್ವಿಗೊಳಿಸುತ್ತದೆ ಎಂದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುವ ಕೆಲಸ ಶೀಘ್ರದಲ್ಲಿಯೇ ಆಗುತ್ತದೆ. ಹಿಂದೆ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ನಮ್ಮ ಸರ್ಕಾರ ಬಂದು ಎರಡು ವರ್ಷ ಮೂರು ತಿಂಗಳಾಗಿದೆ. ಮುಳುಗಡೆ ಸಂತ್ರಸ್ತರ ಸರ್ವೆ ಕಾರ್ಯ ನಡೆಯುತ್ತಿದೆ. ಪ್ರತಿ ಕೇಸ್ ಸಹ ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು. ಸಾಮಾಜಿಕ, ಡ್ರೋಣ್ ಮೂಲಕ ಸರ್ವೇ ಕಾರ್ಯ ನಡೆದಿದೆ. ಈ ಭಾಗದ ಜನರಿಗೆ ಸಿಗಂದೂರು ದೇವಿಯ ಆಶೀರ್ವಾದದಿಂದ ಶರಾವತಿ, ಚಕ್ರ, ವರಾಹಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವ ಕೆಲಸ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತದೆ ಎಂದು ಹೇಳಿದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮಳೆ ಬೆಳೆಯಾಗುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಕಳೆದ ವರ್ಷ ಸಹ ಉತ್ತಮ ಮಳೆಯಾಗಿ ಡ್ಯಾಂ ಭರ್ತಿಯಾಗಿತ್ತು. ಈ ವರ್ಷವೂ ಸಹ ಡ್ಯಾಂ ಭರ್ತಿಯಾಗಿದ್ದು, ಲಿಂಗನಮಕ್ಕಿ ಡ್ಯಾಂ ನಿರ್ಮಾಣವಾದ ನಂತರ ೨೧ನೇ ಬಾರಿ ಕ್ರೆಸ್ಟ್ಗೇಟ್ ತೆರೆದು ನೀರು ಬಿಟ್ಟಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಪ್ರಮುಖರಾದ ಪ್ರಸನ್ನಕುಮಾರ್, ರವಿಕುಮಾರ್, ಕಲಗೋಡು ರತ್ನಾಕರ. ರಾಜು, ಕಲಸೆ ಚಂದ್ರಪ್ಪ, ಉಪವಿಭಾಗಾಧಿಕಾರಿ ವೀರೇಶಕುಮಾರ್, ಎಎಸ್‌ಪಿ ಡಾ.ಬೆನಕ ಪ್ರಸಾದ್, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಹಾಜರಿದ್ದರು.