ಸಾರಾಂಶ
ಪಾಕಿಸ್ತಾನವು ಭಾರತದ ಎಸ್- 400 ಕ್ಷಿಪಣಿಯನ್ನು ನಾಶಪಡಿಸಿದ್ದೇವೆ. ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೆ ‘ಪಾಕಿಸ್ತಾನ ಅಂತಹ ಯಾವುದೇ ದಾಳಿ ಮಾಡಿಲ್ಲ,ಅದು ಸುಳ್ಳು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಪಾಕಿಸ್ತಾನವು ಭಾರತದ ಎಸ್- 400 ಕ್ಷಿಪಣಿಯನ್ನು ನಾಶಪಡಿಸಿದ್ದೇವೆ. ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೆ ‘ಪಾಕಿಸ್ತಾನ ಅಂತಹ ಯಾವುದೇ ದಾಳಿ ಮಾಡಿಲ್ಲ,ಅದು ಸುಳ್ಳು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.
ವಿದೇಶಾಂಗ ಇಲಾಖೆ ಮತ್ತು ರಕ್ಷಣಾ ಇಲಾಖೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಹೇಳಿದ ಹಸಿ ಸುಳ್ಳುಗಳನ್ನು ಭಾರತ ಬಯಲು ಮಾಡಿದೆ. ಪಾಕಿಸ್ತಾನವು ಜೆಎಫ್-17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್‌ಸಾನಿಕ್ ಕ್ಷಿಪಣಿಗಳು ಆದಂಪುರದಲ್ಲಿ ಭಾರತದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ನಾಶಪಡಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಮಾತ್ರವಲ್ಲದೇ ಪಾಕಿಸ್ತಾನ, ಚೀನಾದ ಸುದ್ದಿ ಸಂಸ್ಥೆಗಳು ಕೂಡ ಈ ಬಗ್ಗೆ ವರದಿ ಮಾಡಿದ್ದವು.
ಆದರೆ ಇದೆಲ್ಲವೂ ಸುಳ್ಳು, ಎಸ್-400 ಕ್ಷಿಪಣಿ ನಾಶವಾಗಿಲ್ಲ ಎಂದು ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲದೇ ಭಾರತದ ಮೂಲಭೂತ ಸೌಕರ್ಯ, ವಿದ್ಯುತ್ ವ್ಯವಸ್ಥೆಗಳು, ಸೈಬರ್ ವ್ಯವಸ್ಥೆಗಳು, ಇತ್ಯಾದಿ ದೊಡ್ಡ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿದ್ದೇವೆ ಎನ್ನುವ ಅವರ ಹೇಳಿಕೆಗಳು ಸುಳ್ಳು’ ಎಂದಿದ್ದಾರೆ.
ವಾಯುನೆಲೆ ಮೇಲೆ ದಾಳಿಯಾಗಿಲ್ಲ:
ಪಾಕಿಸ್ತಾನವು ಭಾರತದ ಭಾರತದ ಸಿರ್ಸಾ ಮತ್ತು ಸೂರತ್ ವಾಯು ನೆಲೆಯನ್ನು ಧ್ವಂಸ ಮಾಡಿರುವುದಾಗಿ ಪಾಕಿಸ್ತಾನ ಹೇಳಿ ಕೊಂಡಿತ್ತು. ಆದರೆ ವಿಕ್ರಮ್ ಮಿಸ್ರಿ ಅದನ್ನು ಅಲ್ಲಗೆಳೆದಿದ್ದಾರೆ. ಪಾಕಿಸ್ತಾನ ಆ ರೀತಿ ದಾಳಿ ಮಾಡಿಲ್ಲ. ನಮ್ಮ ಸಿರ್ಸಾ ಮತ್ತು ಸೂರತ್ ವಾಯುನೆಲೆ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.
ಭಾರತ ವಿಭಜಿಸಲು ಪಾಕ್ ಷಡ್ಯಂತ್ರ:
ಇನ್ನು ಪಾಕಿಸ್ತಾನ ಸಂಘರ್ಷದ ಜೊತೆಗೆ ಕೋಮು ಸಂಘರ್ಷವನ್ನು ಬಿತ್ತುವ ಕೆಲಸ ಮಾಡುತ್ತಿದ್ದು, ಭಾರತವು ಅಮೃತಸರದ ಸಾಹಿಬ್ , ಅಪ್ಘಾನಿಸ್ತಾನಕ್ಕೆ ಕ್ಷಿಪಣಿ ಹಾರಿಬಿಟ್ಟಿದೆ ಎಂದು ಹೇಳಿತ್ತು. ಆದರೆ ಈ ಎರಡೂ ಆರೋಪವನ್ನು ಮಿಸ್ರಿ ತಳ್ಳಿ ಹಾಕಿದ್ದಾರೆ. ‘ಸಾಹಿಬ್ ಮೇಲೆ ಭಾರತ ಕ್ಷಿಪಣಿ ಹಾರಿಸಿಬಿಟ್ಟಿಲ್ಲ. ಇದು ಭಾರತವನ್ನು ವಿಭಜಿಸುವ ತಂತ್ರದ ಭಾಗ ’ ಎಂದಿದ್ದಾರೆ. ಜೊತೆಗೆ ‘ಭಾರತದ ಕ್ಷಿಪಣಿಯಿಂದ ಅಪ್ಘಾನಿಸ್ತಾನಕ್ಕೆ ಹಾನಿ ಎನ್ನುವುದು ಕ್ಷುಲ್ಲಕ ಆರೋಪ’ ಎಂದಿದ್ದಾರೆ.
------
ಭಾರತದ ನಾಗರಿಕರು ಸರ್ಕಾರದ ಕ್ರಮಗಳಿಂದ ಹತಾಶೆಯಲ್ಲಿದ್ದಾರೆ ಎಂಬ ಪಾಕ್ ಮಾಧ್ಯಮಗಳ ಸುದ್ದಿಗೂ ಪ್ರತಿಕ್ರಿಯಿಸಿದ ಅವರು, ‘ ನಾಗರಿಕರು ತಮ್ಮದೇ ಸರ್ಕಾರವನ್ನು ಟೀಕಿಸುವುದನ್ನು ನೋಡುವುದು ಪಾಕಿಸ್ತಾನಕ್ಕೆ ಆಶ್ಚರ್ಯವಾಗಬಹುದು. ಅದು ಮುಕ್ತ ಮತ್ತು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಲಕ್ಷಣವಾಗಿದೆ, ಅದರ ಬಗ್ಗೆ ಪಾಕಿಸ್ತಾನಕ್ಕೆ ಪರಿಚಯವಿಲ್ಲದಿರುವುದು ಆಶ್ವರ್ಯಕರವಲ್ಲ’ ಎಂದು ತಿರುಗೇಟು ನೀಡಿದ್ದಾರೆ.