ಭಾರತ - ಪಾಕಿಸ್ತಾನ ನಡುವೆ ಘನಘೋರ ವಾಯು ಸಂಘರ್ಷ : ಅಧಿಕೃತವಾಗಿಯೇ ಯುದ್ಧ ಆರಂಭ

| N/A | Published : May 09 2025, 06:35 AM IST

indo pak news .jpg
ಭಾರತ - ಪಾಕಿಸ್ತಾನ ನಡುವೆ ಘನಘೋರ ವಾಯು ಸಂಘರ್ಷ : ಅಧಿಕೃತವಾಗಿಯೇ ಯುದ್ಧ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಯುದ್ಧ ಆರಂಭವಾಗಿದೆ.

 ನವದೆಹಲಿ/ಇಸ್ಲಾಮಾಬಾದ್‌: ಭಾರತವು ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಯುದ್ಧ ಆರಂಭವಾಗಿದೆ.

ಬುಧವಾರ ರಾತ್ರಿ ಹಾಗೂ ಗುರುವಾರ ಪಾಕಿಸ್ತಾನ 2 ಸಲ ಭಾರತದ ಮೇಲೆ ದಾಳಿ ಮಾಡಿ ಮಾರುತ್ತರ ನೀಡಲು ಯತ್ನಿಸಿದೆ. ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿ, ತನ್ನ ಸ್ವಯಂರಕ್ಷಣೆ ಮಾಡಿಕೊಂಡು ಪ್ರತಿದಾಳಿ ನಡೆಸಿದೆ. ಈ ಮೂಲಕ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅಧಿಕೃತವಾಗಿಯೇ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗಿದೆ ಹಾಗೂ ಒಟ್ಟು 2 ಹಂತಗಳಲ್ಲಿ ಗುರುವಾರ ವಾಯು ಸಂಘರ್ಷ ನಡೆದಿದೆ.

‘ಆಪರೇಶನ್‌ ಸಿಂದೂರ’ ಇನ್ನೂ ಮುಗಿದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಹೇಳಿದ್ದಾರೆ. ಅತ್ತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪಾಕ್ ಸೇನೆಗೆ ಪ್ರತೀಕಾರ ತೀರಿಸಿಕೊಳ್ಳುವ ಅಧಿಕಾರ ನೀಡಿದ್ದಾರೆ. ಹೀಗಾಗಿ ಸಮರ ಅಧಿಕೃತವಾಗಿಯೇ ಆರಂಭವಾದಂತಿದೆ.

ಬೆಳಗ್ಗೆ ಒಂದು ಹಂತದ ದಾಳಿ-ಪ್ರತಿದಾಳಿ:

ಗುರುವಾರ ಬೆಳಗ್ಗೆ ಭಾರತವು ಪಾಕಿಸ್ತಾನದಿಂದ ತನ್ನ 15 ನಗರಗಳತ್ತ ಬಂದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ತನ್ನ ಎಸ್‌-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆ ಬಳಸಿ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಲಾಹೋರ್ ಸೇರಿದಂತೆ 3 ಪಾಕ್‌ ನಗರಗಳ ವಾಯುರಕ್ಷಣಾ ವ್ಯವಸ್ಥೆಯನ್ನು ಶಕ್ತಿಶಾಲಿ ಹಾರ್ಪಿ ಡ್ರೋನ್‌ ಪ್ರಯೋಗಿಸಿ ನಾಶ ಮಾಡಿದೆ.

ಸಂಜೆ 2ನೇ ಹಂತದ ದಾಳಿ-ಪ್ರತಿದಾಳಿ:

ಇದಾದ ನಂತರ ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್‌, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ದಾಳಿ ಮಾಡಿದೆ.

ಜಮ್ಮು ವಿಮಾನ ನಿಲ್ದಾಣ, ಕೆಲವು ಮಿಲಿಟರಿ ನೆಲೆಗಳು ಸೇರಿದಂತೆ ಜಮ್ಮುವಿನ ಹಲವಾರು ಸ್ಥಳಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳ ಮೇಲೆ ರಾಕೆಟ್, ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಭಾರತವು ಈ ಮೂರೂ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತಗೊಳಿಸಿದೆ ಹಾಗೂ ಎಸ್‌-400 ವಾಯುರಕ್ಷಣಾ ವ್ಯವಸ್ಥೆ 8 ಪಾಕ್‌ ಕ್ಷಿಪಣಿ ಹಾಗೂ 2 ಡ್ರೋನ್‌ ನಾಶ ಮಾಡಿದೆ. ಈ ಮೂಲಕ ಹಾನಿಯನ್ನು ತಡೆದಿದೆ.

ಆದರೆ ಭಾರತ ಇಷ್ಟಕ್ಕೇ ಸುಮ್ಮನಾಗದೇ ಗುರುವಾರ ರಾತ್ರಿ ಕೂಡ ಲಾಹೋರ್ ಹಾಗೂ ಸಿಯಾಲ್‌ಕೋಟ್‌ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಜೊತೆಗೆ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ಮತ್ತು ಪಾಕಿಸ್ತಾನದ ಪಂಜಾಬ್‌ ವಾಯುನೆಲೆಗಳ ಮೇಲೂ ಭಾರತದ ಸೇನೆ ದಾಳಿ ನಡೆಸಿದೆ.

ಭಾರತ - ಪಾಕಿಸ್ತಾನ ನಡುವೆ ಘನಘೋರ ವಾಯು ಸಂಘರ್ಷ

ಕಾಶ್ಮೀರ, ಪಂಜಾಬ್‌, ರಾಜಸ್ಥಾನದ ಮೇಲೆ ಪಾಕ್‌ ದಾಳಿ ಯತ್ನ

ಗಡಿಯಲ್ಲೇ ಪಾಕ್‌ ಅಸ್ತ್ರ ಹೊಡೆದುರುಳಿಸಿದ ಸುದರ್ಶನ ಚಕ್ರ

ಭಾರತದ ತಿರುಗೇಟಿಗೆ ಲಾಹೋರ್‌ ಏರ್‌ಡಿಫೆನ್ಸ್‌ ವ್ಯವಸ್ಥೆ ಧ್ವಂಸ

ದಾಳಿಗೆ ಬಂದ ಎಫ್‌ 16, ಜೆಎಫ್‌ 17 ಉರುಳಿಸಿದ ಸೇನಾಪಡೆ

ಲಾಹೋರ್‌, ಇಸ್ಲಾಮಾಬಾದ್‌, ಸಿಯಾಲ್‌ಕೋಟ್‌ ಮೇಲೂ ದಾಳಿ

ಲಷ್ಕರ್‌ ಉಗ್ರ ಸಯೀದ್‌ನ ಲಾಹೋರ್‌ ಮನೆ ಪೂರ್ಣ ಧ್ವಂಸ

ಪಾಕಿಸ್ತಾನದ ಸೇನಾ ನೆಲೆಗಳನ್ನೂ ಗುರಿಯಾಗಿಸಿ ಅಟ್ಯಾಕ್‌