ರಾಜಧಾನಿಯಲ್ಲಿ ಯುದ್ಧ ರಕ್ಷಣೆ ತಾಲೀಮು : ‘ಆಪರೇಷನ್‌ ಅಭ್ಯಾಸ್‌’ ಮಾಕ್‌ ಡ್ರಿಲ್‌

| N/A | Published : May 08 2025, 02:35 AM IST / Updated: May 08 2025, 05:04 AM IST

mock drill
ರಾಜಧಾನಿಯಲ್ಲಿ ಯುದ್ಧ ರಕ್ಷಣೆ ತಾಲೀಮು : ‘ಆಪರೇಷನ್‌ ಅಭ್ಯಾಸ್‌’ ಮಾಕ್‌ ಡ್ರಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯ ಹಲಸೂರಿನ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೇಂದ್ರ ಕಚೇರಿ ಆವರಣ ಬುಧವಾರ ಸುಮಾರು ಮೂರೂವರೆ ತಾಸು ಯುದ್ಧಪೀಡಿತ ಪ್ರದೇಶವಾಗಿ ಮಾರ್ಪಟ್ಟಿತು.

 ಬೆಂಗಳೂರು : ರಾಜಧಾನಿಯ ಹಲಸೂರಿನ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೇಂದ್ರ ಕಚೇರಿ ಆವರಣ ಬುಧವಾರ ಸುಮಾರು ಮೂರೂವರೆ ತಾಸು ಯುದ್ಧಪೀಡಿತ ಪ್ರದೇಶವಾಗಿ ಮಾರ್ಪಟ್ಟಿತು.

ಆಪತ್ತಿನ ಎಚ್ಚರಿಕೆ ಗಂಟೆ, ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್‌ಗಳ ಸೈರನ್‌ಗಳು ಮೊಳಗಿದವು. ಅಗ್ನಿಶಾಮಕ ಸಿಬ್ಬಂದಿ, ಸಿವಿಲ್‌ ಡಿಫೆನ್ಸ್‌, ಗೃಹರಕ್ಷದಳದ ಸಿಬ್ಬಂದಿ ಹಾಗೂ ಪೊಲೀಸರು ಅಪಾಯದಲ್ಲಿ ಸಿಲುಕಿದ್ದ ನಾಗರಿಕರು, ಗಾಯಾಳುಗಳು ಹಾಗೂ ಕಟ್ಟಡದೊಳಗೆ ಸಿಲುಕಿದ್ದವರ ರಕ್ಷಣೆ ಕಾರ್ಯದಲ್ಲಿ ತೊಡಗಿದರು. ರಾತ್ರಿ ಸುಮಾರು 10 ನಿಮಿಷ ಇಡೀ ಆವರಣದ ಕಟ್ಟಡಗಳ ಲೈಟ್ಸ್‌ ಆಫ್‌ ಮಾಡಿಸಿ ಬ್ಲಾಕ್‌ ಔಟ್‌ ಮಾಡಲಾಯಿತು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಸಚಿವಾಲಯದ ಸೂಚನೆ ಮೇರೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಯುದ್ಧದಂತಹ ತುರ್ತು ಸಂದರ್ಭಗಳು, ವೈಮಾನಿಕ ದಾಳಿಗಳು, ಬಾಂಬ್‌ ಸ್ಫೋಟದಂತಹ ಸನ್ನಿವೇಶದಲ್ಲಿ ನಾಗರಿಕರು ತಮ್ಮ ರಕ್ಷಣೆ ಜತೆಗೆ ಇತರರ ರಕ್ಷಣೆ ಹೇಗೆ ಮಾಡಬೇಕು. ಅಪಾಯದ ಸೈನರ್‌ ಮೊಳಗಿದಾಗ ಸಾರ್ವಜನಿಕರು ಏನೆಲ್ಲಾ ಮಾಡಬೇಕು ಎಂಬುದು ಸೇರಿ ಯುದ್ಧ ಸನ್ನಿವೇಶ ನಿಭಾಯಿಸುವ ಕುರಿತು ಆಪರೇಷನ್‌ ಅಭ್ಯಾಸ್‌ ಹೆಸರಿನಲ್ಲಿ ಅಣಕು ಪ್ರದರ್ಶನದ ಮುಖಾಂತರ ಅರಿವು ಮೂಡಿಸಲಾಯಿತು.

ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್‌, ಗೃಹರಕ್ಷದಳ, ಪೊಲೀಸರು, ಸಿವಿಲ್‌ ಡಿಫೆನ್ಸ್‌, ಎನ್‌ಸಿಸಿ ಕೆಡೆಟ್‌ಗಳು, ಭಾರತ್‌ ಸ್ಕೌಟ್‌ ಆ್ಯಂಡ್ ಗೈಡ್ಸ್‌ ಕೆಡೆಟ್‌ಗಳು ಈ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಎರಡು ನಿಮಿಷ ಸೈರನ್‌ ಮೊಳಗಿಸುವುದರೊಂದಿಗೆ ಹಲಸೂರು ಕೆರೆಯಲ್ಲಿ ಈ ಮಾಕ್‌ ಡ್ರಿಲ್‌ ಆರಂಭವಾಯಿತು. ಕೆರೆಯ ದ್ವೀಪದಲ್ಲಿ ಸಿಲುಕಿದ್ದ ನಾಗರಿಕರನ್ನು ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್‌ ಮುಖಾಂತರ ರಕ್ಷಣೆ ಮಾಡಿದರು.

ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೇಂದ್ರ ಕಚೇರಿಯ ಆವರಣ ಕಟ್ಟಡದ ಮೇಲೆ ಬಾಂಬ್‌ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಸನ್ನಿವೇಶ ಸೃಷ್ಟಿಸಿ, ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಿಂದಿಸಿ ಕಟ್ಟಡದೊಳಗೆ ಸಿಲುಕಿದ್ದ ಸಾರ್ವಜನಿಕರು ಹಾಗೂ ಗಾಯಾಳುಗಳನ್ನು ರಕ್ಷಣೆ ಮಾಡಿ ಹೊರಗೆ ತರುವ ಹಾಗೂ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಅಣಕು ಪ್ರದರ್ಶನ ಮಾಡಿದರು.

ಇದೇ ವೇಳೆ ಬಹುಮಹಡಿ ಕಟ್ಟಡದೊಳಗೆ ಸಿಲುಕಿದ್ದ ಸಾರ್ವಜನಿಕರನ್ನು ಏರಿಯಲ್‌ ಲ್ಯಾಡರ್‌ ಮುಖಾಂತರ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ ಗಾಯಾಳುಗಳು ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಆಸ್ಪತ್ರೆಗೆ ಸಾಗಿಸಿದರು. ಬಳಿಕ ರಾತ್ರಿ 7.10ಕ್ಕೆ ಆವರಣ ಹಾಗೂ ಅಲ್ಲಿನ ಕಟ್ಟಡಗಳ ಲೈಟ್‌ಗಳನ್ನು ಸಂಪೂರ್ಣ ಆಫ್‌ ಮಾಡಿ ಬ್ಲಾಕ್‌ ಔಟ್‌ ಅಣಕು ಪ್ರದರ್ಶನ ಮಾಡಿದರು. ಸಂಪೂರ್ಣ ಕತ್ತಲೆಯಲ್ಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮಾಡುವ ಅಣಕು ಪ್ರದರ್ಶಿಸಿದರು.

ಏನಿದು ಬ್ಲಾಕ್‌ ಔಟ್‌?:

ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರ ರಾತ್ರಿ ವೇಳೆ ವೈಮಾನಿಕ ದಾಳಿ ಮಾಡುವ ಮುನ್ಸೂಚನೆ ಅರಿತು ಭಾರತೀಯ ವಾಯು ಸೇನೆ ಕಮಾಂಡ್‌ ಸೆಂಟರ್‌ ಸಂದೇಶ ನೀಡುತ್ತದೆ. ಈ ವೇಳೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸೇರಿ ಪೊಲೀಸ್ ಠಾಣೆಗಳು ಹಾಗೂ ಇತರೆಡೆ ಅಳವಡಿಸಿರುವ ಸೈರನ್‌ಗಳನ್ನು 2 ನಿಮಿಷ ಮೊಳಗಿಸಲಿದೆ. ಈ ವೇಳೆ ಸಾರ್ವಜನಿಕರು ತಕ್ಷಣ ಮನೆಗಳ ಲೈಟ್‌ಗಳನ್ನು ಆಫ್‌ ಮಾಡಬೇಕು. ಕಿಟಕಿ ಪರದೆಗಳನ್ನು ಮುಚ್ಚಬೇಕು. ಬಳಿಕ ಕುಟುಂಬದ ಸದಸ್ಯರು ಒಂದೆಡೆ ಕುಳಿತು ಅಗತ್ಯವಿರುವ ಬಟ್ಟೆಗಳು, ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಬಳಿಕ ತಮ್ಮ ಹತ್ತಿರ ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲ್‌ ಸಂಖ್ಯೆಗಳನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮತ್ತೊಮ್ಮೆ ಸೈರನ್‌ ಮೊಳಗಿದಾಗ ವಾತಾವರಣ ಶಾಂತವಾಗಿದೆ ಎಂದು ಅರ್ಥ ಮಾಡಿಕೊಂಡು ತಮ್ಮ ಮನೆಗಳಿಗೆ ತೆರಳಬೇಕು. ಮನೆಯ ವಿದ್ಯುತ್‌ ಸಂಪರ್ಕ ಹಾಗೂ ನೀರಿನ ಸಂಪರ್ಕವನ್ನು ಒಮ್ಮೆ ಪರಿಶೀಲಿಸಬೇಕು. ಈ ಪ್ರಕ್ರಿಯೆಯನ್ನು ಬ್ಲಾಕ್‌ ಔಟ್‌ ಎಂದು ಕರೆಯಲಾಗುತ್ತದೆ.

ಸೈಬರ್‌ ವಂಚಕರ ಬಗ್ಗೆ ಎಚ್ಚರ:

ಯುದ್ಧದ ಸನ್ನಿವೇಶಗಳಲ್ಲಿ ಸೈಬರ್‌ ವಂಚಕರ ಬಗ್ಗೆ ಎಚ್ಚರವಹಿಸಬೇಕು. ಏಕೆಂದರೆ, ಯುದ್ಧದ ಸಂದರ್ಭದಲ್ಲಿ ನಾವು ನಿಮ್ಮನ್ನು ಅಲರ್ಟ್‌ ಮಾಡುತ್ತೇವೆ ಎಂದು ಸಂದೇಶ ಅಥವಾ ಕರೆ ಮಾಡುವ ಸಾಧ್ಯತೆಯಿದೆ. ವಂಚಕರು ಒಟಿಪಿ ಹಾಗೂ ವೈಯಕ್ತಿಕ ಮಾಹಿತಿ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಇಂತಹ ಕರೆ ಅಥವಾ ಸಂದೇಶಗಳಿಗೆ ಗಮನಕೊಡಬಾರದು. ಮೊಬೈಲ್‌ ಕರೆ ಅಥವಾ ಸಂದೇಶ ಮುಖಾಂತರ ಯುದ್ಧದ ಬಗ್ಗೆ ಅಲರ್ಟ್‌ ಮಾಡುವ ಸಂಬಂಧ ಸರ್ಕಾರದಿಂದ ಯಾವುದೇ ಆದೇಶ ಅಥವಾ ಸೂಚನೆ ಬಂದಿಲ್ಲ. ಕೇವಲ ಸೈರನ್‌ ಮಾತ್ರ ಮೊಳಗಿಸಲಾಗುತ್ತದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೃದ್ಧರು, ರೋಗಿಗಳು, ವಿಶೇಷ ಚೇತನರ ಬಗ್ಗೆ ಮುನ್ನೆಚ್ಚರಿಕೆ:

ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗಳಲ್ಲಿ ನೆಲೆಸಿರುವ ಕುಟುಂಬಗಳು ತಮ್ಮ ಮನೆಯಲ್ಲಿ ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ವಿಶೇಷ ಚೇತನರು ಇದ್ದರೆ ಮುನ್ನೆಚ್ಚರಿಕೆ ವಹಿಸಬೇಕು. ಯುದ್ಧದ ಸಂದರ್ಭದಲ್ಲಿ ಅವರನ್ನು ನೆಲ ಮಹಡಿ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಇರಿಸಬೇಕು. ತುರ್ತು ಸಂದರ್ಭಗಳಲ್ಲಿ ಎಲ್ಲರೂ ಲಿಫ್ಟ್‌ ಬಳಸಲು ಸಾಧ್ಯವಿಲ್ಲ. ಹೀಗಾಗಿ ಮೆಟ್ಟಿಲುಗಳನ್ನು ಬಳಸಬೇಕು. ಅಭ್ಯಾಸ ಇಲ್ಲದಿದ್ದರೆ, ಈಗಿನಿಂದಲೇ ಮೆಟ್ಟಿಲು ಬಳಸುವದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ 33 ಕಡೆ ಮೊಳಗಿದ ಸೈರನ್‌:

ಆಪರೇಷನ್‌ ಅಭ್ಯಾಸ್‌ ಹೆಸರಿನಲ್ಲಿ ಮಾಕ್‌ ಡ್ರಿಲ್ ಆರಂಭಕ್ಕೂ ಮುನ್ನ ಎರಡು ನಿಮಿಷ ಸೈರನ್‌ ಮೊಳಗಿಸಲಾಯಿತು. ಇದೇ ಸಮಯದಲ್ಲಿ ನಗರದಲ್ಲಿನ 33 ಕಡೆ ಸೈರನ್‌ ಮೊಳಗಿಸಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್, ಇಎಸ್‌ಐ ಆಸ್ಪತ್ರೆ, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, ಎಸ್‌ಆರ್‌ಎಸ್ ಪೀಣ್ಯ, ವಿವಿ ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ ಸೇರಿ 33 ಕಡೆ ಸೈರನ್‌ ಮೊಳಗಿದೆ. ಆರಂಭದಲ್ಲಿ ಸಾರ್ವಜನಿಕರು ಸೈರನ್‌ ಶಬ್ಧ ಕೇಳಿ ಆತಂಕಗೊಂಡಿದ್ದರು. ಈ ವೇಳೆ ಹೋಯ್ಸಳ ಪೊಲೀಸರು ಇದು ಅಣಕು ಪ್ರದರ್ಶನದ ಭಾಗವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಮಾಕ್‌ ಡ್ರಿಲ್‌ ವೀಕ್ಷಣೆ:

ಈ ಆಪರೇಷನ್‌ ಅಭ್ಯಾಸ್ ಮಾಕ್‌ ಡ್ರಿಲ್‌ ವೀಕ್ಷಣೆಗೆ ಹಲಸೂರು, ಶಿವಾಜಿನಗರ, ಪುಲಿಕೇಶಿನಗರ, ಕಾಕ್ಸ್‌ಟೌನ್‌, ಸೋಮೇಶ್ವರನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಆಗಮಿಸಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಮಕ್ಕಳೂ ಸಹ ಕುತೂಹಲದಿಂದ ಮಾಕ್‌ ಡ್ರಿಲ್‌ ವೀಕ್ಷಿಸಿದರು. ನಗರದ ವಿವಿಧ ಶಾಲಾ-ಕಾಲೇಜುಗಳ ಎನ್‌ಸಿಸಿ, ಸ್ಕೌಟ್ಸ್‌ ಆ್ಯಂಡ್‌ ಗೈಡ್‌ ಕೆಡೇಟ್‌ಗಳು, ವಾಯು ಸೇನೆ, ಭೂ ಸೇನೆ, ನೌಕ ಪಡೆಯ ಸೈನಿಕರು ಈ ಅಣಕು ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದರು.