ಸಾರಾಂಶ
ಚಾಮರಾಜಪೇಟೆಯಲ್ಲಿ ಈಚೆಗೆ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವದ ಪಾತ್ರ ರೂಪಿಸಿ ಸಚಿವ ಜಮೀರ್ ಅಹ್ಮದ್ ಅವರನ್ನು ವೇದಿಕೆಗೆ ಕರೆತರುವ ಕಾರ್ಯಕ್ರಮ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಬೆಂಗಳೂರು : ಚಾಮರಾಜಪೇಟೆಯಲ್ಲಿ ಈಚೆಗೆ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವದ ಪಾತ್ರ ರೂಪಿಸಿ ಸಚಿವ ಜಮೀರ್ ಅಹ್ಮದ್ ಅವರನ್ನು ವೇದಿಕೆಗೆ ಕರೆತರುವ ಕಾರ್ಯಕ್ರಮ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ತುಳುನಾಡಿನ ಸಾಂಸ್ಕೃತಿಕ, ಭಕ್ತಿ ಪರಂಪರೆಯ ಅಣಕು ಪ್ರದರ್ಶನ ಮಾಡುವ ಮೂಲಕ ಅಗೌರವ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕಾಂತಾರ ಸಿನಿಮಾದ ಹಾಡು ಬಳಸಿ ಜಮೀರ್ ಅಹ್ಮದ್ ಕೈಹಿಡಿದು ವೇಷಧಾರಿಗಳು ನರ್ತಿಸಿದ್ದಾರೆ. ಇದು ತುಳುನಾಡಿನ ಸಂಸ್ಕೃತಿಗೆ ಅಪಚಾರ ಮಾಡಿದಂತೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಗಳಿಗೆ ಅಪಹಾಸ್ಯ ಮಾಡುವುದು ಸರಿಯಲ್ಲ. ದೈವರಾಧನೆ ತುಳುನಾಡಿನ ಸಾಂಸ್ಕೃತಿಕ ರಚನೆಯಲ್ಲಿ ಆಳವಾಗಿ ಬೇರೂರಿರುವ ಪವಿತ್ರ ಸಂಪ್ರದಾಯ. ಇದು ನಮ್ಮ ಶ್ರೀಮಂತ ಪರಂಪರೆಯ ಸಂಕೇತ ಎಂದು ಕರಾವಳಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದೈವದ ವೇಷ ಧರಿಸಲು ಅವಕಾಶ ಕೊಡಬಾರದು ಎಂದು ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತುಳು ಸಂಘಟನೆಗಳು ಮನವಿ ಸಲ್ಲಿಸಿದ್ದವು. ತುಳುನಾಡಿನ ಸಾಂಸ್ಕೃತಿಕ ಸಂಪ್ರದಾಯ ರಕ್ಷಿಸಲು ಸರ್ಕಾರವು ತುಳು ಬುಡಕಟ್ಟು ಸಾಂಸ್ಕೃತಿಕ ಮಂಡಳಿ (ಟಿಟಿಸಿಬಿ) ಸ್ಥಾಪಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.