ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ - ಪ್ರತಿ ಕೇಜಿಗೆ 22.50 ರು. ನಿಗದಿ - 556 ಮೆಟ್ರಿಕ್‌ ಟನ್‌ ದಾಸ್ತಾನು

| N/A | Published : Feb 18 2025, 06:22 AM IST

annabhagya

ಸಾರಾಂಶ

ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್​​ಸಿಐ) ಮೂಲಕ ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕೇವಲ 22.50 ರು.ಗಳಂತೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

  ಬೆಂಗಳೂರು : ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್​​ಸಿಐ) ಮೂಲಕ ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕೇವಲ 22.50 ರು.ಗಳಂತೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

2024ರ ಜೂನ್​ನಿಂದ ಡಿಸೆಂಬರ್​ವರೆಗೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಅಕ್ಕಿ ಹಾಗೂ ಗೋಧಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ದೇಶಾದ್ಯಂತ 556 ಲಕ್ಷ ಮೆಟ್ರಿಕ್​ ಟನ್​ ಅಕ್ಕಿ ದಾಸ್ತಾನು ಇದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಪ್ರತಿ ಕೆ.ಜಿ.ಗೆ 5.50 ರು. ಕಡಿಮೆ ದರದಲ್ಲಿ (ಕಳೆದ ಬಾರಿ ಕೆಜಿ ಅಕ್ಕಿಗೆ 28 ರು.ಗಳಂತೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡಲಾಗಿತ್ತು) ಹೊಸ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್​ಎಸ್​), ಇ-ಹರಾಜು ಮೂಲಕ ವ್ಯಾಪಾರಿಗಳು, ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿ ಖಾಸಗಿಯವರೂ ಒಂದು ಟನ್​ನಿಂದ 5 ಸಾವಿರ ಟನ್​ವರೆಗೆ ಖರೀದಿಸಲು ಅವಕಾಶ ನೀಡಿದೆ.

ಹರಾಜು ಇಲ್ಲದೇ ಮಾರಾಟ: ಕಮ್ಯುನಿಟಿ ಕಿಚನ್ಸ್​ಗೆ ಪ್ರತಿ ಕೆ.ಜಿ. ಅಕ್ಕಿಯನ್ನು 22.50 ರು.ನಂತೆ ಮಾರಾಟ ಮಾಡಿದರೆ, ಕೇಂದ್ರ ಸಹಕಾರಿ ಸಂಸ್ಥೆಗಳಾದ ನೆಡ್​, ಎನ್​ಸಿಸಿಎಫ್‌, ಕೇಂದ್ರೀಯ ಭಂಡಾರ್​ಗಳಿಗೆ ಕೆ.ಜಿ. ಅಕ್ಕಿಗೆ 24 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಖಾಸಗಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ಪ್ರತಿ ಕೆ.ಜಿ.ಗೆ 28 ರು.ನಂತೆ ಮಾರಾಟ ಮಾಡುತ್ತಿದ್ದು ಖಾಸಗಿ ವ್ಯಕ್ತಿಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸಹಕಾರಿ ಒಕ್ಕೂಟಗಳಿಗೆ ಇ-ಹರಾಜಿನ ಮೂಲಕ ಕೆ.ಜಿ.ಗೆ 28 ರು.ನಂತೆ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಅಕ್ಕಿ ಕೊರತೆಯಿರುವ ಪ್ರದೇಶಗಳಲ್ಲಿ ಇ-ಹರಾಜು ಇಲ್ಲವೇ ನೇರವಾಗಿ ಮಾರಾಟ ಮಾಡಲು ಆದೇಶಿಸಲಾಗಿದೆ ಎಂದು ಎಫ್‌ಸಿಐ ಮೂಲಗಳು ತಿಳಿಸಿವೆ.

ನೂರಾರು ಕೋಟಿ ರು. ಉಳಿಕೆ

ಎಫ್‌ಸಿಐನಿಂದ ಪ್ರತಿ ಕೆಜಿ ಅಕ್ಕಿಗೆ 22.50 ರು.ನಂತೆ ಖರೀದಿಸಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಹಂಚಿದರೆ ನೂರಾರು ಕೋಟಿ ರು.ಉಳಿಕೆಯಾಗಲಿದೆ. ಪ್ರಸ್ತುತ ಡಿಬಿಟಿ ಮೂಲಕ ಪ್ರತಿ ಕೆಜಿಗೆ 34 ರು.ನಂತೆ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರು.ನಗದನ್ನು ಖಾತೆಗೆ ಹಾಕಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಒಂದು ಕೋಟಿ ಕಾರ್ಡ್​ಗಳಿಗೆ 450-500 ಕೋಟಿ ರು.ಜಮೆ ಮಾಡಲಾಗುತ್ತಿದೆ. ಅಕ್ಕಿ ಖರೀದಿ ಮಾಡಿ ಹಂಚುವುದರಿಂದ ರಾಜ್ಯ ಸರ್ಕಾರಕ್ಕೆ ಉಳಿತಾಯವಾಗಲಿದೆ.