ಸಾರಾಂಶ
ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮೇ 1ರ ಕಾರ್ಮಿಕ ದಿನದಂದು ಕಾಯಂಗೊಳಿಸಿದ ಆದೇಶ ಪತ್ರವನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು
ಬೆಂಗಳೂರು : ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮೇ 1ರ ಕಾರ್ಮಿಕ ದಿನದಂದು ಕಾಯಂಗೊಳಿಸಿದ ಆದೇಶ ಪತ್ರವನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವಿದ್ದಾಗಲೇ ಅವರನ್ನು ಕಾಯಂಗೊಳಿಸುವ ಕುರಿತು ಘೋಷಿಸಲಾಗಿತ್ತು ಮತ್ತು ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತು. ಇದೀಗ ಕಾಯಂಗೊಳಿಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ 20 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕ ಆದೇಶಪತ್ರ ನೀಡಲಾಗುವುದು ಎಂದು ಹೇಳಿದರು.
ಪೌರಕಾರ್ಮಿಕರ ಜತೆಗೆ ಒಳಚರಂಡಿ ಸ್ವಚ್ಛತಾ ಕೆಲಸ ಮಾಡುವ ಕಾರ್ಮಿಕರನ್ನೂ ಕಾಯಂಗೊಳಿಸಲಾಗುವುದು. ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ಗುತ್ತಿಗೆ ಚಾಲಕರು, ಹೆಲ್ಪರ್, ಲೋಡರ್‌ಗಳನ್ನು ಗುತ್ತಿಗೆ ಪದ್ಧತಿಯಿಂದ ಹೊರತಂದು ನೇರ ವೇತನ ಪಾವತಿ ವ್ಯವಸ್ಥೆ ಅಡಿ ತರಲಾಗುವುದು. ಆಯಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತದಿಂದಲೇ ವೇತನ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅದರೊಂದಿಗೆ ಪೌರಕಾರ್ಮಿಕರಿಗೆ ನಗದು ರಹಿತ ಚಿಕಿತ್ಸೆ ಸೇವೆಯನ್ನೂ ಜಾರಿಗೊಳಿಸಲಾಗುವುದು ಎಂದರು.
ಅಲ್ಲದೆ. ಪೌರಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದಂತೆ ಐಪಿಡಿ ಸಾಲಪ್ಪ ಅವರು ನೀಡಿದ ವರದಿಯನ್ನು ಪರಿಶೀಲಿಸಿ, ಅದರಲ್ಲಿನ ಶಿಫಾರಸುಗಳ ಅನುಷ್ಠಾನಕ್ಕೂ ನಿರ್ಧರಿಸಲಾಗಿದೆ. ಈ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಯಕದ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಒಂದೇ, ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರೂ ಒಂದೇ. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬಾರದು. ಹೀಗಾಗಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವಿದ್ಯೆಯಿಲ್ಲದಿದ್ದರೆ ಗುಲಾಮರಂತಾಗಬೇಕಾಗುತ್ತದೆ. ಅದಕ್ಕೆ ಬೇಕಾಗುವ ಎಲ್ಲ ನೆರವನ್ನೂ ಸರ್ಕಾರ ನೀಡಲಿದೆ. ಪೌರಕಾರ್ಮಿಕರ ಮಕ್ಕಳು ವೈದ್ಯರು, ಎಂಜಿನಿಯರ್‌ಗಳಾಗಬೇಕು. ಹಾಗೆಯೇ, ಪೌರಕಾರ್ಮಿಕರಿಗೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲು ಸಬ್ಸಿಡಿಯಲ್ಲಿ ಮನೆ ಅಥವಾ ನಿವೇಶನ ವಿತರಿಸಲಾಗುತ್ತಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ 730 ಕೋಟಿ ರು. ಮೀಸಲಿರಿಸಲಾಗಿದೆ. ಅದರಲ್ಲಿ 500 ಕೋಟಿ ರು.ಗಳನ್ನು ನೇರ ವೇತನ ಪಾವತಿಗಾಗಿ ಬಳಸಲಾಗುವುದು. ಜತೆಗೆ 107 ಕೋಟಿ ರು.ಗಳನ್ನು ಪಿಂಚಣಿಗೆ ಮೀಸಲಿಡಲಾಗಿದೆ. ಜತೆಗೆ ಸಮವಸ್ತ್ರ, ಮಕ್ಕಳ ವಿದ್ಯಾಭ್ಯಾಸ ಶುಲ್ಕ ಮರುಪಾವತಿ, ಒಂಟಿ ಮನೆ ಯೋಜನೆ ಸೇರಿದಂತೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡಲಾಗಿದೆ. ಅದರ ಜತೆಗೆ ಪೌರ ಕಾರ್ಮಿಕ ಕೆಲಸ ಕಾಯಂ ಆದರೆ ಅವರ ವೇತನ 50 ಸಾವಿರ ರು.ವರೆಗೆ ತಲುಪಲಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ವಿಚಾರದಲ್ಲಿ ಒಂದಷ್ಟು ಅಧಿಕಾರಿಗಳು ಸಿಂಧುತ್ವ ಪ್ರಮಾಣಪತ್ರ ನೀಡುವಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರಿದೆ. ಯಾವ ಪೌರಕಾರ್ಮಿಕರೂ ಯಾವುದೇ ಅಧಿಕಾರಿಗೂ ಒಂದು ರು. ಲಂಚ ನೀಡಬಾರದು. ಹಣ ಕೇಳಿದ ಬಗ್ಗೆ ಲಿಖಿತ ದೂರು ನೀಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ, ಸಿಂಧುತ್ವ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಸಂಘದ ಅಧ್ಯಕ್ಷ ನಾರಾಯಣ್ ಇದ್ದರು.