ಸಾರಾಂಶ
ಇತ್ತೀಚೆಗೆ ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಮೆಟ್ರೋ ಮಹಿಳಾ ಪ್ರಯಾಣಿಕರ ವಿಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ ಕಿಡಿಗೇಡಿಯೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಇತ್ತೀಚೆಗೆ ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಮೆಟ್ರೋ ಮಹಿಳಾ ಪ್ರಯಾಣಿಕರ ವಿಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ ಕಿಡಿಗೇಡಿಯೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ ಸಮೀಪದ ತಿಗಳರಪಾಳ್ಯದ ನಿವಾಸಿ ದಿಗಂತ್ ಬಂಧಿತನಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂನ ‘ಮೆಟ್ರೋ ಚಿಕ್ಸ್’ ಎಂಬ ಹೆಸರಿನ ಖಾತೆಯಲ್ಲಿ ಮಹಿಳಾ ಪ್ರಯಾಣಿಕರ ವಿಡಿಯೋಗಳು ಅಪ್ ಲೋಡ್ ಆಗಿದ್ದವು. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಬನಶಂಕರಿ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಪೀಣ್ಯ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಕುಚೇಷ್ಟೆ ದಿಗಂತ್:
ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನ ದಿಗಂತ್, ಮುರುಗೇಶ್‌ಪಾಳ್ಯದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಪೀಣ್ಯದ ತಿಗಳರಪಾಳ್ಯ ಬಳಿ ನೆಲೆಸಿದ್ದ ಆತ, ಪ್ರತಿ ದಿನ ಕೆಲಸಕ್ಕೆ ಹೋಗಲು ಮೆಟ್ರೋ ಸೇವೆ ಬಳಸುತ್ತಿದ್ದ.
ಆ ಪ್ರಯಾಣದ ವೇಳೆ ಮಹಿಳಾ ಪ್ರಯಾಣಿಕರ ಚಲನವಲನಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡ ಆತ, ಇನ್‌ಸ್ಟಾಗ್ರಾಂನಲ್ಲಿ ಮೆಟ್ರೋ ಚಿಕ್ಸ್ ಹೆಸರಿನ ಖಾತೆ ತೆರೆದು 13 ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ. ಈ ಖಾತೆಗೆ 5,690 ಫಾಲೋವರ್ಸ್‌ಗಳಿದ್ದರು. ಈ ವಿಡಿಯೋಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಬನಶಂಕರಿ ಪೊಲೀಸರು, ತಕ್ಷಣವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗಿಳಿದರು. ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಬಳಸಿದ್ದ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಬೈಲ್‌ನಲ್ಲಿ ಹಲವು ವಿಡಿಯೋಗಳು
ಆರೋಪಿ ದಿಗಂತ್ ಮೊಬೈಲ್‌ನಲ್ಲಿ ಮತ್ತಷ್ಟು ವಿಡಿಯೋಗಳು ಪತ್ತೆಯಾಗಿವೆ. ತನ್ನದೇ ಮೊಬೈಲ್‌ನಲ್ಲಿ ಆತ ಎಲ್ಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದು, ಅವುಗಳ ಪೈಕಿ 13 ವಿಡಿಯೋಗಳನ್ನು ಮಾತ್ರವಷ್ಟೇ ಇನ್‌ಸ್ಟಾಗ್ರಾಂನಲ್ಲಿ ಆತ ಅಪ್ ಲೋಡ್ ಮಾಡಿದ್ದ. ಬಂಧನದ ಬಳಿಕ ಆರೋಪಿ ಮೊಬೈಲ್ ಅನ್ನು ಜಪ್ತಿ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋ ಮಾಡುವ ವಿಕೃತ ಮನಸ್ಸು:
ಮೆಟ್ರೋ ಪಯಣದ ವೇಳೆ ಮಹಿಳಾ ಪ್ರಯಾಣಿಕರ ವಿಡಿಯೋಗಳನ್ನು ಚಿತ್ರೀಕರಿಸುವ ವಿಕೃತ ಮನಸ್ಸು ಆರೋಪಿಯದ್ದಾಗಿದೆ. ಈ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿ ಹೆಚ್ಚಿನ ಫಾಲೋವರ್ಸ್ ಹೊಂದುವ ಕಿಡಿಗೇಡಿತನ ಸಹ ದಿಗಂತ್‌ನದ್ದಾಗಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
ಮೆಟ್ರೋ ಪಯಣದ ವೇಳೆ ಮಹಿಳಾ ಪ್ರಯಾಣಿಕರ ವಿಡಿಯೋಗಳನ್ನು ಚಿತ್ರೀಕರಿಸುವ ವಿಕೃತ ಮನಸ್ಸು ಆರೋಪಿಯದ್ದಾಗಿದೆ. ಈ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿ ಹೆಚ್ಚಿನ ಫಾಲೋವರ್ಸ್ ಹೊಂದುವ ಕಿಡಿಗೇಡಿತನ ಸಹ ದಿಗಂತ್‌ನದ್ದಾಗಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.