ಸಾರಾಂಶ
‘ನಮ್ಮ ಮೆಟ್ರೋ’ ದರ ಏರಿಕೆ ವಿಚಾರದಲ್ಲಿ ರಾಜಕೀಯ ಸಂಘರ್ಷ ಹೆಚ್ಚಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ಬಿಜೆಪಿ ಸರ್ಕಾರದ ಸಚಿವರು ಪರಸ್ಪರ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ.
ಬೆಂಗಳೂರು : ‘ನಮ್ಮ ಮೆಟ್ರೋ’ ದರ ಏರಿಕೆ ವಿಚಾರದಲ್ಲಿ ರಾಜಕೀಯ ಸಂಘರ್ಷ ಹೆಚ್ಚಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ಬಿಜೆಪಿ ಸರ್ಕಾರದ ಸಚಿವರು ಪರಸ್ಪರ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ.
ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೇ ಪ್ರಯಾಣ ದರ ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅಶ್ಚಿವಿ ವೈಷ್ಣವ್ ಸೇರಿ ಬಿಜೆಪಿ ನಾಯಕರು ಪರಸ್ಪರ ಆರೋಪಣೆಯಲ್ಲಿ ತೊಡಗಿದ್ದಾರೆ. ಇದರ ನಡುವೆ ಹೆಚ್ಚಿನ ದರ ತೆತ್ತು ಪ್ರಯಾಣಿಸುತ್ತಿರುವುದಾಗಿ ಜನ ಅಲವತ್ತುಕೊಳ್ಳುತ್ತಿದ್ದಾರೆ.
ಫೆ.1ರಿಂದ ಜಾರಿಗೆ ಬರಬೇಕಿದ್ದ ಮೆಟ್ರೋ ದರ ಏರಿಕೆಯನ್ನು ಕೇಂದ್ರ ಸರ್ಕಾರ ತಡೆದಿದೆ ಎಂದು ಸಂಸದ ಪಿ.ಸಿ.ಮೋಹನ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದರು. ಆದರೆ, ದೆಹಲಿ ಚುನಾವಣೆ ಮುಗಿದು ಫಲಿತಾಂಶದ ಮರುದಿನದಿಂದ (ಫೆ.9) ಪರಿಷ್ಕೃತ ದರ ಜಾರಿಯಾಗಿತ್ತು. ಮೆಟ್ರೋ ದರ ಪರಿಷ್ಕರಣೆ ನಮ್ಮ ಕೈಯಲ್ಲಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರೆ, ಮೆಟ್ರೋ ದರ ಹೆಚ್ಚಳ ಕುರಿತು ಸಿದ್ದರಾಮಯ್ಯ ಅವರನ್ನು ಜನರು ಪ್ರಶ್ನಿಸಬೇಕು. ಕೇಂದ್ರ ಸರ್ಕಾರವನ್ನಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದರ ಪರಿಷ್ಕರಣೆ ಹೇಗಾಗಿತ್ತು:
ಬೆಂಗಳೂರು ಮೆಟ್ರೋ ರೈಲು ನಿಗಮವು ‘7 ವರ್ಷಗಳಿಂದ ದರ ಪರಿಷ್ಕರಣೆ ಮಾಡಿಲ್ಲ. ನಿರ್ವಹಣೆ, ವೇತನ, ಇಂಧನ, ಸೌಲಭ್ಯ ಕಲ್ಪಿಸುವ ವೆಚ್ಚಗಳು ಪ್ರತಿವರ್ಷ ಏರಿಕೆಯಾಗುತ್ತಿವೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮೂವರು ಸದಸ್ಯರನ್ನು ಒಳಗೊಂಡ ದರ ನಿಗದಿ ಸಮಿತಿಯನ್ನು ರಚಿಸಿತ್ತು.
ಹೀಗೆ ರಚಿಸಿದ್ದ ಬಿಎಂಆರ್‌ಸಿಎಲ್‌ನ ಮೊದಲ ದರ ನಿಗದಿ ಸಮಿತಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ತರಣಿ ಚೇರ್‌ಮನ್ ಆಗಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಬ್ಬರು ಅಂದರೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ ಆರ್.ವಿ. ರಮಣ ರೆಡ್ಡಿ ದರ ಸಮಿತಿಯ ಸದಸ್ಯರಾಗಿದ್ದರು.
ಸಮಿತಿಯು ಅಕ್ಟೋಬರ್ 4ರಿಂದ 21ರವರೆಗೆ ಅವಕಾಶ ನೀಡಿತ್ತು. ಆನಂತರ ಅ.28ರವರೆಗೆ ಈ ಅವಧಿಯನ್ನು ವಿಸ್ತರಿಸಿ ಸಾರ್ವಜನಿಕರಿಂದ ಸಲಹೆ ಸಂಗ್ರಹಿಸಿತ್ತು. 2 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿದ್ದವು. ನಿರ್ವಹಣೆ ಸೇರಿ ವಿವಿಧ ವೆಚ್ಚಗಳನ್ನು ಪರಿಶೀಲಿಸಿ ಡಿ. 16ರಂದು ಬಿಎಂಆರ್‌ಸಿಎಲ್‌ಗೆ ಸಮಿತಿ ವರದಿ ಸಲ್ಲಿಸಿತ್ತು. ಜ.17ರಂದು ನಡೆದಿದ್ದ ಸಭೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯದರ್ಶಿಗಳು, ಬಿಎಂಆರ್‌ಸಿಎಲ್ ಉನ್ನತಾಧಿಕಾರಿಗಳು ದರ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದರು.