ಕರಾವಳಿಯಲ್ಲಿ ಕಡಲ್ಕೊರೆತ ಬಗ್ಗೆ ಸರ್ವೇಗೆ ಸಿದ್ಧತೆ - ವಾಸ್ತವ ಪರಿಸ್ಥಿತಿ ಅರಿಯಲು 480 ಕಿ.ಮೀ. ಸಮೀಕ್ಷೆಗೆ ಸಿದ್ಧತೆ

| Published : Nov 16 2024, 11:03 AM IST

Blue Beaches

ಸಾರಾಂಶ

ರಾಜ್ಯದ ಕರಾವಳಿ ಭಾಗದ ಕಡಲ್ಕೊರೆತ ಪರಿಸ್ಥಿತಿಯನ್ನು ಅರಿಯಲು 480 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಪರಿಸ್ಥಿತಿಯನ್ನು ಸರ್ವೇ ನಡೆಸಲು ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿನ ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ಮುಂದಾಗಿದೆ.

ಗಿರೀಶ್‌ ಗರಗ

  ಬೆಂಗಳೂರು : ರಾಜ್ಯದ ಕರಾವಳಿ ಭಾಗದ ಕಡಲ್ಕೊರೆತ ಪರಿಸ್ಥಿತಿಯನ್ನು ಅರಿಯಲು 480 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಪರಿಸ್ಥಿತಿಯನ್ನು ಸರ್ವೇ ನಡೆಸಲು ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿನ ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ಮುಂದಾಗಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ತೀವ್ರವಾಗಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂಬ ಬೇಡಿಕೆ ಸ್ಥಳೀಯರದ್ದಾಗಿದೆ. ಆದರೆ, ಕಡಲ್ಕೊರೆತದ ಪ್ರಮಾಣ ಹಾಗೂ ಯಾವ ಭಾಗದಲ್ಲಿ ಎಷ್ಟು ತೀವ್ರತೆಯಿದೆ ಎಂಬ ಬಗ್ಗೆ ಸಮರ್ಪಕವಾಗಿ ಅಧ್ಯಯನ ನಡೆದಿಲ್ಲ. ಇದೀಗ ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿನ ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಕರಾವಳಿ ಎಂಜಿನಿಯರಿಂಗ್‌ ವಿಭಾಗವು 480 ಕಿ.ಮೀ. ಉದ್ದದ ಕರಾವಳಿ ಪ್ರದೇಶದಲ್ಲಿ ಸರ್ವೇ ನಡೆಸಲು ಮುಂದಾಗಿದೆ.

ಅದರಂತೆ ಕರಾವಳಿ ಪ್ರದೇಶವನ್ನು ಹೊಂದಿರುವ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯಲಿದೆ.

ಎರಡು ಭಾಗವಾಗಿ ಸರ್ವೇ:

ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಕರಾವಳಿ ಎಂಜಿನಿಯರಿಂಗ್‌ ವಿಭಾಗ ರೂಪಿಸಿರುವ ಯೋಜನೆಯಂತೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ 120ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸರ್ವೇ ಮಾಡಲಾಗುತ್ತದೆ. ಮಳೆಗಾಲ ಮತ್ತು ಮಳೆಗಾಲ ನಂತರದ ಕಡಲ್ಕೊರೆತ ಪರಿಸ್ಥಿತಿಯನ್ನು ಅಳೆಯಲಾಗುತ್ತದೆ. ಪ್ರಮುಖವಾಗಿ ಸಮುದ್ರದ ಅಲೆಗಳ ತೀವ್ರತೆ, ಯಾವ ಕಾಲದಲ್ಲಿ ಅಲೆಗಳು ಯಾವ ರೀತಿಯಲ್ಲಿರುತ್ತವೆ, ಯಾವ ಪ್ರದೇಶದಲ್ಲಿ ಅಲೆಗಳ ತೀವ್ರತೆ ಹೆಚ್ಚಿದೆ, ಯಾವೆಲ್ಲ ಸ್ಥಳಗಳಲ್ಲಿ ಕಡಲ್ಕೊರೆತ ಹೆಚ್ಚಾಗಿ ಸಂಭವಿಸುತ್ತಿದೆ ಮತ್ತು ಕಡಲ್ಕೊರೆತದಿಂದಾಗುತ್ತಿರುವ ಸಮಸ್ಯೆಗಳೇನು ಎಂಬ ಬಗ್ಗೆ ಸಮೀಕ್ಷೆಯಲ್ಲಿ ಪತ್ತೆ ಹಚ್ಚಲು ಉದ್ದೇಶಿಸಲಾಗಿದೆ.

ಕಡಲು ತೀರದ ಮಣ್ಣಿನ ವಿಶ್ಲೇಷಣೆ, ಅಲೆಗಳ ಏರಿಳಿತ, ಕಡಲ ತೀರದಲ್ಲಿನ ಗೋಡೆಗಳ ವಿನ್ಯಾಸಗಳ ಭೌತಿಕ ಮಾದರಿಯನ್ನು ಅಧ್ಯಯನ ಮಾಡಲು ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ಮುಂದಾಗಿದೆ. ಜತೆಗೆ ಯಾವ ಭಾಗದಲ್ಲಿ ಕಡಲ ತೀರದ ಪ್ರದೇಶವು ತೆರೆದುಕೊಂಡಿದೆ, ಕಡಲ ತೀರಕ್ಕೆ ಅಲೆಗಳು ಅಪ್ಪಳಿಸದಂತೆ ತಡೆಯಿದೆಯೇ, ಕಡಲ ತೀರದಲ್ಲಿನ ರಸ್ತೆಗಳು, ಕಟ್ಟಡಗಳು, ಯಾವ ಮಾದರಿಯ ಸಸ್ಯವರ್ಗವಿದೆ, ಯಾವುದಾದರೂ ಸ್ಮಾರಕಗಳಿವೆಯೇ ಎಂಬುದೂ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಿ ಸಮೀಕ್ಷೆ ನಡೆಸಲಾಗುತ್ತದೆ.

ಈ ಕಾರ್ಯಕ್ಕಾಗಿ ಖಾಸಗಿ ಸಂಸ್ಥೆಯನ್ನು ನೇಮಿಸಲಾಗುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಅಂದರೆ 2025ರ ಮಳೆಗಾಲದ ವೇಳೆಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವುದು ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಕರಾವಳಿ ಎಂಜಿನಿಯರಿಂಗ್‌ ವಿಭಾಗದ ಗುರಿಯಾಗಿದೆ.

ಭವಿಷ್ಯದ ಯೋಜನೆಗೆ ಅನುಕೂಲ

ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಕರಾವಳಿ ಎಂಜಿನಿಯರಿಂಗ್‌ ವಿಭಾಗ ಮಾಡುತ್ತಿರುವ ಸಮೀಕ್ಷೆಯು ಭವಿಷ್ಯದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ. ಸಮೀಕ್ಷೆಯಿಂದ ಪಡೆಯಲಾಗುವ ಮಾಹಿತಿಯನ್ನಾಧರಿಸಿ ಯಾವ ಭಾಗದಲ್ಲಿ, ಯಾವ ಕಾಲದಲ್ಲಿ ಕಡಲ್ಕೊರೆತ ಉಂಟಾಗಲಿದೆ ಎಂಬುದು ತಿಳಿಯಬಹುದಾಗಿದೆ. ಅದನ್ನಾಧರಿಸಿ ಕಡಲ್ಕೊರೆತ ತಡೆಗೆ ಯಾವ ಸ್ಥಳದಲ್ಲಿ ಯಾವ ರೀತಿಯ ಪರಿಹಾರ ಕಾರ್ಯ ಕೈಗೊಳ್ಳಬಹುದು ಎಂಬುದನ್ನೂ ನಿರ್ಧರಿಸಬಹುದಾಗಿದೆ.

ಅದರ ಜತೆಗೆ ಮಳೆಗಾಲದಲ್ಲಿ ಅಲೆಗಳ ಸ್ವರೂಪ ಹಾಗೂ ಸಮುದ್ರದ ನೀರು ಎಲ್ಲಿಯವರೆಗೆ ಬರಲಿದೆ ಎಂಬುದು ತಿಳಿದರೆ ಕಡಲ ತೀರದ ನಿವಾಸಿಗಳನ್ನು ಸುರಕ್ಷಿತಗೊಳಿಸಬಹುದಾಗಿದೆ. ಈ ಎಲ್ಲ ಉದ್ದೇಶವಿಟ್ಟುಕೊಂಡು ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಕರಾವಳಿ ಎಂಜಿನಿಯರಿಂಗ್‌ ವಿಭಾಗ ಸಮೀಕ್ಷೆ ನಡೆಸುತ್ತಿದೆ. ಒಮ್ಮೆ ಸಮೀಕ್ಷೆ ಮುಗಿದ ನಂತರ ಜಲಸಂಪನ್ಮೂಲ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳಿಗೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.