ಸಾರಾಂಶ
ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ತಮ್ಮ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ(ಕೆಐಎಡಿಬಿ) ಕಾನೂನು ಬಾಹಿರವಾಗಿ 5 ಎಕರೆ ಜಮೀನು ಮಂಜೂರು ಮಾಡಿಸಿಕೊಂಡ ಆರೋಪ - ದೂರು
ಬೆಂಗಳೂರು : ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ತಮ್ಮ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ(ಕೆಐಎಡಿಬಿ) ಕಾನೂನು ಬಾಹಿರವಾಗಿ 5 ಎಕರೆ ಜಮೀನು ಮಂಜೂರು ಮಾಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಾಗಿದೆ.
ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಅವರು ಈ ಖಾಸಗಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ರಾಧಾಬಾಯಿ ಎಂ.ಖರ್ಗೆ, ಅಳಿಯ ರಾಧಾಕೃಷ್ಣ, ಪುತ್ರರಾದ ಸಚಿವ ಪ್ರಿಯಾಂಕ್ ಖರ್ಗೆ, ರಾಹುಲ್ ಎಂ.ಖರ್ಗೆ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆಐಎಡಿಬಿ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.
ಈ ಖಾಸಗಿ ದೂರು ಸಂಬಂಧ ಶುಕ್ರವಾರ ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ಅವರ ವಾದ ಅಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಆ.5ಕ್ಕೆ ಮೂಂದೂಡಿದೆ.
ಏನಿದು ಪ್ರಕರಣ?: ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ಆರ್ ಅಂಡ್ ಡಿ ಸೆಂಟರ್ ಮತ್ತು ಸೆಂಟರ್ ಆಫ್ ಎಕ್ಸ್‌ಲೆನ್ಸ್ ಆ್ಯಂಡ್ ಟ್ರೈನಿಂಗ್ ಸೆಂಟರ್ ಸ್ಥಾಪಿಸುವ ಸಲುವಾಗಿ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿಎ ನಿವೇಶನ ನೀಡುವಂತೆ 2024ರ ಫೆ.7ರಂದು ಕೆಐಎಡಿಬಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ 2024ರ ಮೇ 30ರಂದು ಟ್ರಸ್ಟ್‌ಗೆ 5 ಎಕರೆ ಜಮೀನು ಮಂಜೂರು ಮಾಡಲಾಗಿತ್ತು.
ಈ ಭೂಮಿ ಪಡೆಯುವಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ಅಪೂರ್ಣ ಅರ್ಜಿ ಪಡೆದು ಕೆಐಎಡಿಬಿ ಅಧಿಕಾರಿಗಳು ಯೋಜನೆಯನ್ನು ಪರಿಶೀಲಿಸದೆ ತರಾತುರಿಯಲ್ಲಿ ಟ್ರಸ್ಟ್‌ಗೆ 5 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಬಿಎನ್‌ಎಸ್ ಸೆಕ್ಷನ್ 314, 316, 61 ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸುವಂತೆ ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿದೆ.
ಮತ್ತೊಂದು ಖಾಸಗಿ ದೂರು: 2014ರಲ್ಲಿ ಬಿಟಿಎಂ 4ನೇ ಹಂತದ 2ನೇ ಬ್ಲಾಕ್‌ನಲ್ಲಿ ಬಿಡಿಎ ವ್ಯಾಪ್ತಿಯ 2 ಎಕರೆ ಸಿಎ ನಿವೇಶನ ಅಕ್ರಮವಾಗಿ ಪರಭಾರೆ ಮಾಡಿದ ಆರೋಪದಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ವಿರುದ್ಧ ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮತ್ತೊಂದು ಖಾಸಗಿ ದೂರು ನೀಡಿದ್ದಾರೆ. ---