ಸಾರಾಂಶ
ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬರುವಾಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕ ಮಹ್ಮದ್ ಭಾಷಾ ಅತ್ತಾರ ಮೇಲೆ ಟಿಟಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಎದುರು ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ಮಾಡಿದರು.
ಕೊಪ್ಪಳ : ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬರುವಾಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕ ಮಹ್ಮದ್ ಭಾಷಾ ಅತ್ತಾರ ಮೇಲೆ ಟಿಟಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಎದುರು ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ಮಾಡಿದರು. ಟಿಟಿ ಅಮಾನತು ಮಾಡಬೇಕೆಂದು ನಿಲ್ದಾಣದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಏ.21ರಂದು ಭಾಗ್ಯನಗರದ ಮಹ್ಮದ್ ಭಾಷಾ ಅತ್ತಾರ ಮೈಸೂರಿನಿಂದ ಕೊಪ್ಪಳಕ್ಕೆ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಟಿಟಿ ಟಿಕೆಟ್ ಚೆಕ್ ಮಾಡುವ ವೇಳೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಆಗ ಮಹ್ಮದ್‌ಭಾಷಾ ಕನ್ನಡ ಮಾತನಾಡಿ ಎಂದು ಹೇಳಿದ್ದಾರೆ. ಆಗ ಟಿಟಿ ಮೊಬೈಲ್ ಕಿತ್ತುಕೊಂಡು ದರ್ಪ ಮೆರೆದಿದ್ದಾನೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿದ್ದು ಬೇಸರದ ಸಂಗತಿ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆಯ ಅಧಿಕಾರಿಯೊಬ್ಬರು ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾಸುವ ಮುನ್ನವೇ ಈ ಪ್ರಕರಣ ನಡೆದಿರುವುದು ಖೇದಕರ ಸಂಗತಿ. ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಅಧಿಕಾರಿಗಳೇ ದೌರ್ಜನ್ಯವೆಸಗಿದರೆ ರೈಲ್ವೆ ಇಲಾಖೆ ಮೇಲಿರುವ ನಂಬಿಕೆ ಹೋಗುತ್ತದೆ. ಕೂಡಲೇ ಟಿಟಿ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಚಂದನಕಟ್ಟಿ ಸೇರಿ ಇತರರು ಪಾಲ್ಗೊಂಡಿದ್ದರು.