ಬೆಂಗಳೂರು : ಪ್ರಸಕ್ತ ಸಾಲಿನ (2025-26) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ ಒಟ್ಟು 6,94,545 ವಿದ್ಯಾರ್ಥಿಗಳ ಪೈಕಿ 5,66,608 ಮಂದಿ ಉತ್ತೀರ್ಣರಾಗಿದ್ದು ಶೇ.81.58 ರಷ್ಟು ಫಲಿತಾಂಶ ದಾಖಲಾಗಿದೆ. ಇದರೊಂದಿಗೆ ಕೋವಿಡ್‌ ಅವಧಿ ಹೊರತುಪಡಿಸಿದರೆ ಈ ಬಾರಿಯ ಫಲಿತಾಂಶ ಐತಿಹಾಸಿಕ ದಾಖಲೆಯಾಗಿದೆ.

ಒಟ್ಟಾರೆ ಫಲಿತಾಂಶ ಮಾತ್ರವಲ್ಲದೆ ಹೊಸಬರ (ಫ್ರೆಷರ್ಸ್‌) ಫಲಿತಾಂಶ ಕೂಡ ಮೊದಲ ಬಾರಿಗೆ ಶೇ.86.48ರಷ್ಟು ದಾಖಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಸಾಮೂಹಿಕವಾಗಿ ಶೇ100ರಷ್ಟು ವಿದ್ಯಾರ್ಥಿಗಳನ್ನು ಪಾಸು ಮಾಡಿದ್ದು ಬಿಟ್ಟರೆ 2023-24ನೇ ಸಾಲಿನಲ್ಲಿ ಒಟ್ಟಾರೆ ಫಲಿತಾಂಶ ಶೇ.81.15 ಮತ್ತು ಹೊಸಬರ ಫಲಿತಾಂಶ ಶೇ.84.59ರಷ್ಟು ಬಂದಿದ್ದೇ ಈವರೆಗಿನ ದಾಖಲೆ ಫಲಿತಾಂಶವಾಗಿತ್ತು. ಇದನ್ನೂ ಮೀರಿ ಈ ಬಾರಿ ಒಟ್ಟಾರೆ ಫಲಿತಾಂಶ ಶೇ.81.58 ಮತ್ತು ಹೊಸಬರ ಫಲಿತಾಂಶ ಶೇ.86.48 ರಷ್ಟು ದಾಖಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಹೊಸಬರ ಫಲಿತಾಂಶ ಶೇ.86.48ರಷ್ಟು ಬಂದಿರುವುದು ಇತಿಹಾಸದಲ್ಲೇ ಮೊದಲು ಎಂದು ಹೇಳಿದರು.


ಇನ್ನು ಕಳೆದ (2024-25)ನೇ ಸಾಲಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ.11.42ರಷ್ಟು ಏರಿಕೆಯಾಗಿದೆ. ಸಿಸಿಕ್ಯಾಮರಾ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು, ಕಳೆದ ಬಾರಿಯ ಫಲಿತಾಂಶ ಶೇ.11ಕ್ಕಿಂತ ಹೆಚ್ಚು ಕುಸಿದಿತ್ತು. ಈ ಬಾರಿ ಮತ್ತೆ ಶೇ.11ಕ್ಕಿಂತ ಹೆಚ್ಚಾಗಿದೆ.

ಸಿಬಿಎಸ್‌ಇ ಸೇರಿ ಬೇರೆ ಬೇರೆ ರಾಜ್ಯದಲ್ಲಿರುವಂತೆ ಪಾಸ್‌ ಅಂಕ ಪ್ರಮಾಣವನ್ನು ಶೇ.35ರ ಬದಲು 33ಕ್ಕೆ ಇಳಿಸಿದ್ದು, ಫಲಿತಾಂಶ ಏರಿಕೆ ಮೇಲೆ ಗಣನೀಯ ಪರಿಣಾಮ ಬೀರಿಲ್ಲ. ಇದರಿಂದ ಕೇವಲ 5,577 ಮಂದಿ ಪಾಸಾಗಿದ್ದಾರೆ. ಈ ಬಾರಿ ತರಗತಿ ಬೋಧನೆ, ವಿಶೇಷ ತರಗತಿ ನಡೆಸುವುದು, ಡಿಸಿ, ಸಿಇಒಗಳನ್ನೊಳಗೊಂಡು ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಿದ್ದು ಫಲಿತಾಂಶ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿನಿಯರೇ ಮೇಲುಗೈ:

ಉಳಿದಂತೆ ಪ್ರದೇಶವಾರು, ಲಿಂಗವಾರು, ಕಾಲೇಜುವಾರು, ಜಿಲ್ಲಾವಾರು ಹೊಸಬರ ಫಲಿತಾಂಶಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಮಾತ್ರ ಮಂಡಳಿ ನೀಡಿದ್ದು, ಅದರಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. 74 ಸರ್ಕಾರಿ ಪಿಯು ಕಾಲೇಜುಗಳು ಸೇರಿ ಒಟ್ಟು 409 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲಾ ಮಕ್ಕಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕೇವಲ 47 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗದೆ ಶೂನ್ಯ ಫಲಿತಾಂಶ ದಾಖಲಾಗಿದೆ. 268 ದೃಷ್ಟಿ ದೋಷದ ವಿದ್ಯಾರ್ಥಿಗಳು ಸೇರಿ ಈ ಬಾರಿ ಪರೀಕ್ಷೆ ಬರೆದಿದ್ದ 1100ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿ 800ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.

ಮಾಧ್ಯಮವಾರು ವಿವರ:

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ.76.41 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಶೇ.90.63 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಾಲೇಜುವಾರು ಸರ್ಕಾರಿ ಪಿಯು ಕಾಲೇಜಿನಲ್ಲಿ ಶೇ.78.72, ಅನುದಾನಿತ ಕಾಲೇಜಿನಲ್ಲಿ ಶೇ.82.91, ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಶೇ.90.73, ಬಿಬಿಎಂಪಿ ಕಾಲೇಜುಗಳಲ್ಲಿ ಶೇ.77.78 ಮತ್ತು ವಸತಿ ಸಹಿತ ಪಿಯು ಕಾಲೇಜುಗಳಲ್ಲಿ ಶೇ.93.99ರಷ್ಟು ಫಲಿತಾಂಶ ಬಂದಿದೆ. ಸಂಯೋಜನೆ ವಾರು ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04, ವಿಜ್ಞಾನ ವಿಭಾಗದಲ್ಲಿ ಶೇ.91.69 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಉಡುಪಿ ಟಾಪ್‌:

ಜಿಲ್ಲಾವಾರು ಉಡುಪಿ ಶೇ.96.39, ದಕ್ಷಿಣ ಕನ್ನಡ ಶೇ.96.35 ಫಲಿತಾಂಶ ಪಡೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಉಳಿಸಿಕೊಂಡಿವೆ. ಶೇ.71.21ರಷ್ಟು ಫಲಿತಾಂಶದೊಂದಿಗೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಮೂರೂ ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಟಾಪರ್ಸ್‌

ವಿಜ್ಞಾನ

500ಕ್ಕೆ 599

ಪ್ರಿನ್ಸಿಲ್ಲಾ ಕಾರ್ಡೋಜ, ದಿ ಲರ್ನಿಂಗ್‌ ಸೆಂಟರ್‌, ಮಂಗಳೂರು

ವಾಣಿಜ್ಯ

600ಕ್ಕೆ 600

ಅದಿತಿ ಬಾಪು, ಎಸ್‌ಬಿ ಮಹಾವೀರ ಜೈನ್‌ ಕಾಲೇಜು, ವಿವಿ ಪುರ, ಬೆಂಗಳೂರು

ದಿಶಾ, ಆಳ್ವಾಸ್‌ ಪಿಯು ಕಾಲೇಜು, ಮೂಡಬಿದರೆ

ಕಲಾ ವಿಭಾಗ 600ಕ್ಕೆ 598

ಅರ್ಚನಾ, ಇಂದು ಪಿಯು ಕಾಲೇಜು, ಕೊಟ್ಟೂರು

ಶೃತಿ, ಎಸ್‌ಎಂಟಿ ವಿಜಿ ಮಹಿಳಾ ಪಿಯು ಕಾಲೇಜು, ಕಲಬುರಗಿ

ಈ ಬಾರಿ ಪರೀಕ್ಷೆ-3 ಇಲ್ಲ

ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಐತಿಹಾಸಿಕ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ - 3 ಅನ್ನು ನಡೆಸುವುದಿಲ್ಲ. ಪರೀಕ್ಷೆ- 2 ಅನ್ನು ಮಾತ್ರ ನಡೆಸಲಾಗುವುದು. ಇದು ಈ ವರ್ಷದ ನಿರ್ಧಾರ ಮಾತ್ರ. ಮುಂದೆ ಅಗತ್ಯವೆನಿಸಿದರೆ ಮತ್ತೆ ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ.

- ಮಧು ಬಂಗಾರಪ್ಪ, ಶಿಕ್ಷಣ ಸಚಿವ