ಸಾರಾಂಶ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ದಿಢೀರ್ ದಾಳಿ ನಡೆಸಿ, ನಗದು ಸೇರಿ ಮೊಬೈಲ್, ಚಾಕು ಜಪ್ತಿ ಮಾಡಿದ್ದಾರೆ.
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ದಿಢೀರ್ ದಾಳಿ ನಡೆಸಿ, ನಗದು ಸೇರಿ ಮೊಬೈಲ್, ಚಾಕು ಜಪ್ತಿ ಮಾಡಿದ್ದಾರೆ.
ದಾಳಿ ವೇಳೆ ಮೊಬೈಲ್, ಚಾಕು, ಮೊಬೈಲ್ ಚಾರ್ಜರ್ ಹಾಗೂ 15,500 ರು. ನಗದು ಪತ್ತೆಯಾಗಿದ್ದು, ಅಕ್ರಮ ಚಟುವಟಿಕೆಗೆ ಸಹಕರಿಸಿದ ಆರೋಪದ ಮೇರೆಗೆ ಕಾರಾಗೃಹ ಮತ್ತು ಜೈಲಿನ ಭದ್ರತೆಗೆ ನಿಯೋಜಿತರಾಗಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್) ಸಿಬ್ಬಂದಿ ಹಾಗೂ ಕೈದಿಗಳಾದ ಚೆಲುವ, ಆಕಾಶ್, ಮಾರುತಿ ಹಾಗೂ ಇರ್ಷಾದ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ಕಾರಾಗೃಹದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಕೆ.ಎಂ.ಸತೀಶ್ ನೇತೃತ್ವದಲ್ಲಿ ಐವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಹೆಚ್ಚಿನ ಪೊಲೀಸರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ಸಜಾ ಬಂಧಿ ವಿಭಾಗದ ‘ಸಿ’ ಬ್ಯಾರೆಕ್‌ನಲ್ಲಿ ಸಜಾ ಕೈದಿ ಚೆಲುವ ಬಳಿ 7 ಸಾವಿರ ರು, ಇರ್ಷಾದ್‌ನಿಂದ ಮೊಬೈಲ್, ಆಕಾಶ್ ಬಳಿ 5 ಸಾವಿರ ರು, ಮಾರುತಿಯಿಂದ 2,500 ರು ಹಾಗೂ ಇತರೆ ಸೆಲ್‌ಗಳಲ್ಲಿ ಎಲೆಕ್ಟ್ರಿಕ್ ಸ್ಟೌವ್, 4 ಚಾಕುಗಳು ಹಾಗೂ ಮೊಬೈಲ್ ಚಾರ್ಜರ್ ಪತ್ತೆಯಾಗಿವೆ. ಜೈಲಿನೊಳಕ್ಕೆ ಈ ನಿಷೇಧಿತ ವಸ್ತುಗಳು ನುಸುಳಲು ಹಾಗೂ ಬಳಸಲು ಅವಕಾಶ ನೀಡಿದ ಆರೋಪದ ಮೇರೆಗೆ ಕಾರಾಗೃಹ ಮತ್ತು ಕೆಎಸ್‌ಐಎಫ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.