ಸಾರಾಂಶ
ರಾಜ್ಯಾದ್ಯಂತ ಬಿರುಬಿಸಿಲಿನ ತಾಪ ಮೇಲೇರುತ್ತಿರುವ ಮಧ್ಯೆಯೇ ಗುರುವಾರ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯನಗರ, ಹಾವೇರಿ ಹಾಗೂ ಗದಗ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು-ಮಿಂಚು ಸಹಿತ ಕೆಲ ಗಂಟೆಗಳ ಕಾಲ ಮಳೆಯಾಗಿದೆ.
ಬೆಂಗಳೂರು : ರಾಜ್ಯಾದ್ಯಂತ ಬಿರುಬಿಸಿಲಿನ ತಾಪ ಮೇಲೇರುತ್ತಿರುವ ಮಧ್ಯೆಯೇ ಗುರುವಾರ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯನಗರ, ಹಾವೇರಿ ಹಾಗೂ ಗದಗ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು-ಮಿಂಚು ಸಹಿತ ಕೆಲ ಗಂಟೆಗಳ ಕಾಲ ಮಳೆಯಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮಧ್ಯಾಹ್ನ ಸಿಡಿಲು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣ ಸೇರಿ ತಾಲೂಕಿನ ಜಯಪುರ, ಲೋಕನಾಥಪುರ, ಹರಿಹರಪುರ ಸುತ್ತಮುತ್ತ ಸಂಜೆ ಒಂದು ಗಂಟೆ ಕಾಲ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿ, ಹಿರೇಬಿಲಗುಂಜಿ, ಬರೂರಲ್ಲಿ ಒಂದು ಗಂಟೆ ಕಾಲ ವರ್ಷದ ಮೊದಲ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ, ಹಂಪಿ, ಕಮಲಾಪುರ, ಕಡ್ಡಿರಾಂಪುರ, ಹಾವೇರಿ ಜಿಲ್ಲೆ ಸವಣೂರು, ಹಾವೇರಿ, ಹಾನಗಲ್ ತಾಲೂಕು, ಗದಗ ಜಿಲ್ಲೆಯ ರೋಣ, ನರಗುಂದ, ಲಕ್ಷ್ಮೇಶ್ವರ ತಾಲೂಕಿನ ಹಲವಾರು ಪ್ರದೇಶದಲ್ಲಿ ಮಳೆಯಾಗಿದೆ.
ಹರಪನಹಳ್ಳಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದರೆ, ಹಾವೇರಿ, ಹಾನಗಲ್‌ನಲ್ಲಿ ಅರ್ಧ ಗಂಟೆ ಮಳೆ ಸುರಿದಿದೆ.
ಗಾಳಿ ರಭಸಕ್ಕೆ ಹಾನಗಲ್ಲ ತಾಲೂಕು ಹೇರೂರು ಗ್ರಾಮದ ಚಂದ್ರಪ್ಪ ನಿಂಬನಗೌಡ್ರ ಎಂಬವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಚಾವಣಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.
ಅದೇ ರೀತಿ ದಾವಣಗೆರೆ ತಾಲೂಕಿನ ಹೆಬ್ಬಾಳ್, ಹೆಬ್ಬಾಳ್ ಬಡಾವಣೆ, ಹುಣಸೇಕಟ್ಟೆ, ಹಾಲುವರ್ತಿ, ಹೊಸಹಳ್ಳಿ, ಹೆಬ್ಬಾಳ್ ಟೋಲ್, ನೆರೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಭಾಗದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ದಪ್ಪಹನಿಗಳ ಮಳೆಯಾಗಿದೆ. ವರ್ಷದ ಮೊದಲ ಮಳೆಗೆ ರೈತರು ಹರ್ಷಚಿತ್ತರಾಗಿದ್ದಾರೆ.
ಸಂಜೆ ಬಜಗೋಳಿ, ಮಾಳ ಮಿಯ್ಯಾರು, ನೆಲ್ಲಿಕಾರು ಹೊಸ್ಮಾರು, ಈದು, ಕೆರುವಾಶೆ, ಮಾಳ, ಶಿರ್ಲಾಲು, ರೆಂಜಾಳ, ಮರ್ಣೆಯಲ್ಲಿ ಮಳೆಯಾಗಿದೆ. ಹೆಬ್ರಿ ತಾಲೂಕು ಅಂಡಾರು, ಮುನಿಯಾಲು, ಮುಟ್ಲುಪಾಡಿಗಳಲ್ಲಿ ಉತ್ತಮ ಮಳೆ ಸುರಿದಿದೆ.