ಸಾರಾಂಶ
ವಿಧಾನಸೌಧದ ಮಹಾದ್ವಾರದ ಮೆಟ್ಟಿಲುಗಳ ಮೇಲೆ ನ.1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಮಾರೋಪದಲ್ಲಿ ಬರೋಬ್ಬರಿ 169 ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬೆಂಗಳೂರು : ವಿಧಾನಸೌಧದ ಮಹಾದ್ವಾರದ ಮೆಟ್ಟಿಲುಗಳ ಮೇಲೆ ನ.1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಮಾರೋಪದಲ್ಲಿ ಬರೋಬ್ಬರಿ 169 ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿಗಳ ಪಟ್ಟಿ ಸಾವಿರದ ಗಡಿ ದಾಟಿದ್ದು, ಇದುವರೆಗೆ ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಕಡೆಯ ದಿನವಾದ ಸೆ.30ರೊಳಗೆ ಅರ್ಜಿಗಳ ಸಂಖ್ಯೆ 2 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
69ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಲೆ, ಸಾಹಿತ್ಯ, ಜಾನಪದ, ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ 69 ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.
ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್ ಮೂಲಕ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು ಅಕ್ಟೋಬರ್ ಮೊದಲ ವಾರದಿಂದಲೇ ಪರಿಶೀಲನೆ ನಡೆಯಲಿದೆ.
ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ:
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಅಭಿಯಾನದ ಅಂಗವಾಗಿ ಸುವರ್ಣ ಮಹೋತ್ಸವದ ಪ್ರಶಸ್ತಿಗೆ 100 ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ಹಿರಿಯ ಲೇಖಕಿ, ವೈದ್ಯೆ ಡಾ.ವಸುಂಧರಾ ಭೂಪತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಮಾನಸ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚೆನ್ನಪ್ಪ ಕಟ್ಟಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಸೇರಿದಂತೆ ಇತರೆ ಅಕಾಡೆಮಿಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದಾರೆ.
100 ಸಾಧಕರಿಗೆ ಪ್ರಶಸ್ತಿ:
ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪಾಲಿಸುವ ಮಾನದಂಡವನ್ನೇ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿಗೂ ಅನ್ವಯವಾಗಲಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 50 ಮಹಿಳಾ ಸಾಧಕಿಯರು ಮತ್ತು 50 ಪುರುಷ ಸಾಧಕರನ್ನು ಗುರುತಿಸಿ ಒಟ್ಟು 100 ಸಾಧಕರಿಗೆ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅರ್ಜಿಗೆ ನಾಳೆಯ ಕೊನೆ ದಿನ
ಈ ಬಾರಿ ಕೂಡ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್ https://sevasindhu.Karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಸೆ.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.