ಸಾರಾಂಶ
ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ನಟಿ, ಮಾಜಿ ಸಂಸದೆ ರಮ್ಯಾ ಮತ್ತು ದರ್ಶನ್ ಅಭಿಮಾನಗಳ ನಡುವಿನ ಜಗಳ ಇದೀಗ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ನಟಿ, ಮಾಜಿ ಸಂಸದೆ ರಮ್ಯಾ ಮತ್ತು ದರ್ಶನ್ ಅಭಿಮಾನಗಳ ನಡುವಿನ ಜಗಳ ಇದೀಗ ಠಾಣೆ ಮೆಟ್ಟಿಲೇರಿದೆ.. ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ದರ್ಶನ್ ಅಭಿಮಾನಿಗಳು ಎನ್ನಲಾದ ವ್ಯಕ್ತಿಗಳ ವಿರುದ್ಧ ರಮ್ಯಾ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ 4 ಪುಟಗಳ ಲಿಖಿತ ದೂರು ನೀಡಿದ್ದಾರೆ.
ರಮ್ಯಾ ತಮ್ಮ ಈ ದೂರಿನಲ್ಲಿ 43 ಇನ್‌ಸ್ಟಾಗ್ರಾಂ ಖಾತೆಗಳ ಹೆಸರು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ.
ಅಶ್ಲೀಲ ಕಮೆಂಟ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ವಿಚಾರಣೆ ನಡೆದ ಸಂದರ್ಭದಲ್ಲಿ ಜು.24ರಂದು ರಮ್ಯಾ, ‘ಸುಪ್ರೀಂ ಕೋರ್ಟ್ ಜನಸಾಮಾನ್ಯರ ಭರವಸೆಯಾಗಿದೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಲಿ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದಾದ ಬಳಿಕ ಅವರಿಗೆ ದರ್ಶನ್ ಅಭಿಮಾನಿಗಳೆಂದು ಕರೆಸಿಕೊಳ್ಳುವ ಬಹಳಷ್ಟು ಮಂದಿ ಅಶ್ಲೀಲ ಸಂದೇಶ ಕಳುಹಿಸಿದ್ದರು. ಜು.26ರಂದು ಕೆಲ ಅಶ್ಲೀಲ ಸಂದೇಶಗಳನ್ನು ರಮ್ಯಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂದು ನಿಮ್ಮ ಕಮೆಂಟ್‌ಗಳೇ ಹೇಳುತ್ತಿವೆ’ ಎಂದೂ ಹೇಳಿದ್ದರು. ಅದಕ್ಕೆ ಮತ್ತಷ್ಟು ಅಶ್ಲೀಲ ಕಮೆಂಟ್‌ಗಳು ಬಂದಿದ್ದರಿಂದ ರಮ್ಯಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನಾನು ನನ್ನ ಪರವಾಗಿ ಮಾತ್ರವೇ ದೂರು ನೀಡಿಲ್ಲ, ಸಮಸ್ತ ಹೆಣ್ಣು ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಕೆಟ್ಟ ಕಮೆಂಟ್‌ಗಳು ಬರುತ್ತವೆ ಎಂದು ಗೊತ್ತಿತ್ತು. ಆದರೆ ಇಷ್ಟೊಂದು ಕೆಟ್ಟದಾಗಿ ಸಂದೇಶ ಬರುತ್ತವೆ ಎಂದು ತಿಳಿದಿರಲಿಲ್ಲ. ಎಲ್ಲಕ್ಕೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಕಮೆಂಟ್ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಯಾರಾದರೂ ದನಿ ಎತ್ತಿದರೆ ಆ ಹೆಣ್ಣಿನ ಚಾರಿತ್ರ್ಯ ಹರಣ ಮಾಡಲಾರಂಭಿಸುತ್ತಾರೆ. ನನ್ನಂಥಾ ಸೆಲೆಬ್ರಿಟಿಗಳಿಗೂ ಈ ಥರ ಮೆಸೇಜ್ ಮಾಡಿದರೆ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಕಥೆ ಏನಾಗಬೇಕು. ಈ ಸಲ ಅಂಥವರಿಗೆ ಸ್ಪಷ್ಟ ಸಂದೇಶ ಹೋಗಬೇಕು ಎಂದು ಈ ಕ್ರಮಕ್ಕೆ ಮುಂದಾದೆ. ಚಿತ್ರರಂಗದಲ್ಲಿ ಬಹಳಷ್ಟು ಮಂದಿ ನನಗೆ ಮೆಸೇಜ್ ಮಾಡಿ ಬೆಂಬಲ ನೀಡಿದ್ದಾರೆ. ಕೆಲವರಿಗೆ ಮುಂದೆ ಬರುವುದಕ್ಕೆ ಭಯ ಇದೆ, ನನಗೆ ಇಲ್ಲ. ಈ ನಿಟ್ಟಿನಲ್ಲಿ ನನಗೆ ನ್ಯಾಯ ಸಿಗುವ ಭರವಸೆ ಇದೆ’ ಎಂದರು.
ಈ ಸಂದರ್ಭದಲ್ಲಿ ಅವರು ದರ್ಶನ್ ಕುರಿತೂ ಮಾತನಾಡಿ, ‘ಇದರಲ್ಲಿ ದರ್ಶನ್ ತಪ್ಪೂ ಇದೆ. ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದರೆ ರೇಣುಕಾಸ್ವಾಮಿ ಹತ್ಯೆಯೇ ನಡೆಯುತ್ತಿರಲಿಲ್ಲ. ರೇಣುಕಾಸ್ವಾಮಿ ಕೂಡ ಅವರ ಅಭಿಮಾನಿ ಆಗಿದ್ದವರೇ ಅಲ್ವಾ? ಅವರು ಯಾಕೆ ಮೌನವಾಗಿದ್ದಾರೆ ಅಂತ ಗೊತ್ತಿಲ್ಲ. ಆನ್‌ಲೈನ್‌ನಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಮನನೊಂದು ಬಹಳ ಮಂದಿ ಆತ್ಮಹತ್ಯೆಯೂ ಮಾಡಿಕೊಂಡಿದ್ದಾರೆ. ಹೀಗಿರುವಾಗ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಮಾತನಾಡಲೇ ಬೇಕಿದೆ. ಯಾವ ಬೆಂಬಲ ಇಲ್ಲದೇ ಹೋದರೂ ಏಕಾಂಗಿಯಾಗಿ ಆದರೂ ನಾನು ಇಂಥದ್ದರ ವಿರುದ್ಧ ಹೋರಾಟ ಮಾಡುವವಳೇ. ಅದರಿಂದ ಏನಾಗುತ್ತೋ ಬಿಡುತ್ತೋ ನನ್ನ ಕೈಯಲ್ಲಿಲ್ಲ, ಆದರೆ ನಾನು ತಪ್ಪಿನ ವಿರುದ್ಧ ದನಿ ಎತ್ತಿದ್ದೇನೆ ಎಂಬ ತೃಪ್ತಿ ಇರುತ್ತದೆ’ ಎಂದರು.
‘ರೇಣುಕಾಸ್ವಾಮಿ ಬದಲಾಗಿ ನಿನ್ನ ಹತ್ಯೆಯಾಗಬೇಕಿತ್ತು ಎಂದೂ ನನಗೆ ಮೆಸೇಜ್ ಬಂದಿತ್ತು. ಅಶ್ಲೀಲ ಸಂದೇಶಗಳ ಜೊತೆ ಬೆದರಿಕೆ ಕೂಡ ಬಂದಿದೆ. ನನಗೆ ಮಾತ್ರವಲ್ಲ. ಈ ಹಿಂದೆ ಸ್ಟಾರ್‌ಗಳ ಫ್ಯಾನ್ ವಾರ್ ಆದಾಗ ಆ ಸ್ಟಾರ್ ನಟರ ಪತ್ನಿ, ಮಕ್ಕಳಿಗೂ ದರ್ಶನ್ ಅಭಿಮಾನಿಗಳು ಅನ್ನುವವರು ಹೀಗೇ ಕೆಟ್ಟ ಮೆಸೇಜ್ ಕಳಿಸಿದ್ದರು. ಇಂಥಾ ಕೊಳಕು ಸಂಸ್ಕೃತಿಗೆ ನಾವು ಇತಿಶ್ರೀ ಹಾಡಬೇಕಿದೆ’ ಎಂದೂ ರಮ್ಯಾ ಹೇಳಿದರು.
ರಮ್ಯಾ ಪರ ಧ್ವನಿ ಎತ್ತಿದ ನಟರು
ವಿನಯ್ ರಾಜ್‌ಕುಮಾರ್, ಪ್ರಥಮ್ ಹಾಗೂ ಚೇತನ್ ಅಹಿಂಸಾ ರಮ್ಯಾ ಪರ ನಿಂತಿದ್ದಾರೆ. ಈ ಕುರಿತು ವಿನಯ್, ‘ಯಾವುದೇ ರೀತಿಯ ಕಿರುಕುಳ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಟ ಪ್ರಥಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಘನತೆಯಿಂದ ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ರಮ್ಯಾ ಅವರ ಆತ್ಮಗೌರವದ ಪರ ನಿಲ್ಲದೆ ಹೋದರೆ ನಾವು ಕಲಾವಿದರಾಗಲು ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನು ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರುಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ’ ಎಂದು ಹೇಳಿದ್ದಾರೆ.
ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ (ಫೈರ್) ಸಂಸ್ಥೆ ಕೂಡ ರಮ್ಯಾ ಪರ ನಿಂತಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದೆ. ಈ ಕುರಿತು ನಟ ಚೇತನ್ , ‘ನಟಿ ರಮ್ಯಾ ವಿರುದ್ಧ ನಿಂದನಾತ್ಮಕ, ಮಾನಹಾನಿ ಆಗುವಂತಹ ಕಾಮೆಂಟ್‌ಗಳನ್ನು ಹಾಕಿರುವುದು ಸರಿ ಇಲ್ಲ. ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಳ್ಳುತ್ತಿರುವ ಕೆಲವರಿಂದ ಈ ರೀತಿ ಆಗುತ್ತಿದೆ. ಮಹಿಳೆಯರಿಗೆ ಹೀಗೆ ಕೆಟ್ಟದಾಗಿ ಕಾಮೆಂಟ್ ಮಾಡೋದು ತಪ್ಪು’ ಎಂದಿದ್ದಾರೆ.
ರಕ್ಷಿತಾ ಪ್ರೇಮ್, ದರ್ಶನ್ ಪತ್ನಿ
ವಿಜಯಲಕ್ಷ್ಮೀ ನಿಗೂಢ ಸಂದೇಶ
ರಕ್ಷಿತಾ ಪ್ರೇಮ್ ನಿಗೂಢ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಮಾನವರು ಕನಿಷ್ಠ ಸೌಜನ್ಯ ತೋರುವ ಸುದ್ದಿ ಹೆಚ್ಚು ವೈರಲ್ ಆಗಬೇಕೆಂದು ಬಯಸುತ್ತೇನೆ’ ಎಂದಿದ್ದಾರೆ. ರಮ್ಯಾ ವಿರುದ್ಧ ಅವರು ಈ ಕಮೆಂಟ್ ಮಾಡಿದ್ದಾರೆ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇನ್‌ಸ್ಟಾಗ್ರಾಮ್‌ನಲ್ಲಿ, ‘ಮೂರ್ಖರು ಅವರ ಮಾತಿನಿಂದ ಗುರುತಿಸಿಕೊಳ್ಳುತ್ತಾರೆ, ಜ್ಞಾನಿಗಳು ಮೌನದಿಂದಲೇ ತಮ್ಮ ಇರುವು ತೋರಿಸುತ್ತಾರೆ’ ಎಂಬ ಬುದ್ಧನ ಅಭಿಪ್ರಾಯ ಹಾಕಿದ್ದಾರೆ. ಈ ಕುರಿತು ರಮ್ಯಾ ಅವರು ಪ್ರತಿಕ್ರಿಯಿಸಿ, ‘ವಿಜಯಲಕ್ಷ್ಮೀ ಹಾಗೂ ರಕ್ಷಿತಾ ಅವರು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರೋದು ತಿಳಿಯಿತು. ಅದನ್ನು ನೋಡಿದರೆ ಅದು ದರ್ಶನ್ ಫ್ಯಾನ್‌ಗಳ ವಿರುದ್ಧ ಇದ್ದ ಹಾಗಿದೆ. ಇಲ್ಲದೇ ಹೋದರೆ ಒತ್ತಡಕ್ಕೆ ಒಳಗಾಗಿ ಹಾಕಿರಬಹುದು. ಆಮೇಲೆ ಗೊತ್ತಿಲ್ಲ, ವಿಜಯಲಕ್ಷ್ಮೀ, ರಕ್ಷಿತಾ ಅವರ ಮನಸ್ಸಲ್ಲೇನಿದೆ, ಅವರು ಯಾವ ವಿಚಾರ ಇಟ್ಟು ಹೀಗೆ ಪೋಸ್ಟ್ ಹಾಕಿದರು ಅನ್ನೋದನ್ನು ಅವರೇ ಹೇಳಬೇಕಿದೆ’ ಎಂದಿದ್ದಾರೆ.
ರಮ್ಯಾ ವಿರುದ್ಧ ದರ್ಶನ್ ಪತ್ನಿ
ವಿಜಯಲಕ್ಷ್ಮೀ ಕಾನೂನು ಕ್ರಮ?
ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ರಮ್ಯಾ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಅವರು ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ರೇಣುಕಾಸ್ವಾಮಿ ಪ್ರಕರಣ ಕೋರ್ಟ್‌ನಲ್ಲಿ ಇರುವಾಗಲೇ ರಮ್ಯಾ ಅವರು ರೇಣುಕಾಸ್ವಾಮಿ ಪರ ಮಾತನಾಡಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎನ್ನಲಾಗಿದೆ.