ರನ್ಯಾ ಕೇಸ್‌: ಬಳ್ಳಾರಿ ಚಿನ್ನದ ವ್ಯಾಪಾರಿ ಬಂಧನ - ಚಿನ್ನ ವಿಲೇವಾರಿಗೆ ನೆರವು ನೀಡಿದ ಆರೋಪ

| N/A | Published : Mar 27 2025, 08:10 AM IST

Ranya Rao

ಸಾರಾಂಶ

ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ.

ಬೆಂಗಳೂರು : ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ.

ಇದರೊಂದಿಗೆ ಈ ಪ್ರಕರಣದಲ್ಲಿ ಮೂರನೇ ಆರೋಪಿ ಬಂಧನ ಇದಾಗಿದೆ. ಬಳ್ಳಾರಿ ನಗರದ ಬ್ರಾಹ್ಮಿನ್‌ ರಸ್ತೆಯ ಮಹೇಂದ್ರ ಕುಮಾರ್ ಜೈನ್‌ ಪುತ್ರ ಸಾಹಿಲ್ ಸಕಾರಿಯಾ ಜೈನ್‌ ಬಂಧಿತನಾಗಿದ್ದು, ವಿದೇಶದಿಂದ ಕಳ್ಳ ಸಾಗಣೆ ಮೂಲಕ ಚಿನ್ನ ಮಾರಾಟದಲ್ಲಿ ರನ್ಯಾರವರಿಗೆ ಆತ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಸಾಹಿಲ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ಸಲುವಾಗಿ ನಾಲ್ಕು ದಿನಗಳು ಡಿಆರ್‌ಐ ಕಸ್ಟಡಿಗೆ ಪಡೆದಿದೆ ಎಂದು ತಿಳಿದು ಬಂದಿದೆ.

ಹಲವು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯನ್ನು ಸಾಹಿಲ್ ಕುಟುಂಬ ನಡೆಸುತ್ತಿದೆ. ತನ್ನ ಸ್ನೇಹಿತರ ಮೂಲಕ ಆತನಿಗೆ ರನ್ಯಾ ಪರಿಚಯವಾಗಿದೆ. ಹಣದಾಸೆಗೆ ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಆತ ಸಹಕರಿಸಿದ್ದಾನೆ. ಅಂತೆಯೇ ದುಬೈನಿಂದ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತರುತ್ತಿದ್ದ ರನ್ಯಾ, ನಂತರ ಸಾಹಿಲ್ ಮೂಲಕ ಆ ಚಿನ್ನವನ್ನು ವಿಲೇವಾರಿ ಮಾಡಿ ಹಣ ಸಂಪಾದಿಸಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಸಾಹಿಲ್‌ಗೆ ಕೂಡ ಪಾಲು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಮಾ.3 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ 14.2 ಕೆಜಿ ಚಿನ್ನ ಕಳ್ಳ ಸಾಗಣೆ ಮಾಡುವಾಗ ರನ್ಯಾರವನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆಕೆಯ ವಿಚಾರಣೆ ವೇಳೆ ದುಬೈನಲ್ಲಿ ಚಿನ್ನ ಖರೀದಿಗೆ ಸಹಕರಿಸಿದ್ದ ಅವರ ಗೆಳೆಯ ಹಾಗೂ ಏಟ್ರಿಯಾ ಹೋಟೆಲ್‌ ಸಮೂಹದ ಮಾಲಿಕರ ಮೊಮ್ಮಗ ತರುಣ್ ರಾಜ್‌ನನ್ನು ಡಿಆರ್‌ಐ ಬಂಧಿಸಿತು. ಹೀಗೆ ರನ್ಯಾರವರ ಚಿನ್ನ ಕಳ್ಳ ಸಾಗಣೆ ಜಾಲವನ್ನು ಶೋಧಿಸಿದಾಗ ಸಾಹಿಲ್ ಸಹ ಡಿಆರ್‌ಐ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.