ಚಿನ್ನ ಕಳ್ಳಸಾಗಣೆ - ಶಿಷ್ಟಾಚಾರ ದುರ್ಬಳಕೆ ಆರೋಪ : ಅಧಿಕಾರಿಗಳಿಗೆ ಪೊಲೀಸ್ ನೆರವು ವಾಪಸ್‌

| N/A | Published : Mar 22 2025, 02:03 AM IST / Updated: Mar 22 2025, 09:06 AM IST

Bengaluru Airport Pick up Lane
ಚಿನ್ನ ಕಳ್ಳಸಾಗಣೆ - ಶಿಷ್ಟಾಚಾರ ದುರ್ಬಳಕೆ ಆರೋಪ : ಅಧಿಕಾರಿಗಳಿಗೆ ಪೊಲೀಸ್ ನೆರವು ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಡಿಜಿಪಿ ಮಲಮಗಳು, ನಟಿ ರನ್ಯಾರಾವ್‌ ಅವರ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಶಿಷ್ಟಾಚಾರ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕಲ್ಪಿಸಲಾಗಿದ್ದ ‘ಪೊಲೀಸ್ ಸಹಾಯ’ ಸೇವೆ ಹಿಂಪಡೆಯಲಾಗಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಡಿಜಿಪಿ ಮಲಮಗಳು, ನಟಿ ರನ್ಯಾರಾವ್‌ ಅವರ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಶಿಷ್ಟಾಚಾರ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕಲ್ಪಿಸಲಾಗಿದ್ದ ‘ಪೊಲೀಸ್ ಸಹಾಯ’ ಸೇವೆ ಹಿಂಪಡೆಯಲಾಗಿದೆ.

ಚಿನ್ನ ಕಳ್ಳಸಾಗಣೆ ಜಾಲ ಬೆಳಕಿಗೆ ಬಂದ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರ್ಬಳಕೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಕುರಿತು ತನಿಖೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ತಂಡವನ್ನು ಸರ್ಕಾರ ರಚಿಸಿದ್ದು, ಶೀಘ್ರ ವಿಚಾರಣಾ ವರದಿಯನ್ನು ಆ ತಂಡ ಸಲ್ಲಿಸಲಿದೆ.

ಈ ಬೆಳವಣಿಗೆಯಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಜಂಟಿ ಆಯುಕ್ತ (ಪೂರ್ವ) ಬಿ.ರಮೇಶ್ ಬಾನೋತ್ ಅವರು, ವಿಮಾನ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಗಳ ಸಹಾಯಕ್ಕೆ ರಚಿಸಲಾಗಿದ್ದ ತಂಡ ರದ್ದುಗೊಳಿಸಿದ್ದಾರೆ. ಆ ಸಿಬ್ಬಂದಿಯನ್ನು ಅನ್ಯ ಕೆಲಸಗಳಿಗೆ ನಿಯೋಜಿಸುವಂತೆ ಜಂಟಿ ಆಯುಕ್ತರು ಸೂಚಿಸಿದ್ದಾರೆ.

ಪೊಲೀಸ್ ನೆರವಿನ ಸೇವೆ ಸ್ಧಗಿತ:

ವಿಮಾನ ನಿಲ್ದಾಣದಲ್ಲಿ ಗಣ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಕಲ್ಪಿಸುವ ಶಿಷ್ಟಾಚಾರ ನಿರ್ವಹಣೆ ಸಂಬಂಧ ಪ್ರತ್ಯೇಕವಾದ ಪೊಲೀಸ್‌ ವಿಭಾಗವಿಲ್ಲ. ಈ ಶಿಷ್ಟಾಚಾರ ವಿಭಾಗ ಸಂಪೂರ್ಣವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಎಪಿಆರ್‌) ಇಲಾಖೆ ವ್ಯಾಪ್ತಿಗೆ ಬರುತ್ತಿದೆ.

ಆದರೆ ವಿಮಾನ ನಿಲ್ದಾಣಕ್ಕೆ ಬರುವ ಹಿರಿಯ ಐಪಿಎಸ್‌ ಪೊಲೀಸ್ ಅಧಿಕಾರಿಗಳ (ಎಸ್‌ಪಿ-ಡಿಸಿಪಿ ಮೇಲ್ಮಟ್ಟದ) ನೆರವಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ‘ಸಹಾಯಕ ವಿಭಾಗ (ಅಸಿಸ್ಟನ್ಸ್‌)’ ವನ್ನು ತೆರೆಯಲಾಗಿತ್ತು. ಈ ವಿಭಾಗದಲ್ಲಿ ಮೂವರು ಸಿಬ್ಬಂದಿ ಪಾಳಿ ಮೇಲೆ ಕಾರ್ಯನಿರ್ವಹಿಸುತ್ತಿದ್ದರು.

ಇನ್ನು ಈ ಪೊಲೀಸ್ ಸೇವೆಯಿಂದ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸೇರಿ ಅಧಿಕಾರಿಗಳಿಗೆ ಯಾವುದೇ ರೀತಿಯ ವಿನಾಯ್ತಿ ಸಿಗುತ್ತಿರಲಿಲ್ಲ. ಪ್ರಯಾಣಕ್ಕೂ ಮುನ್ನ ಟಿಕೆಟ್ ಹಾಗೂ ಲಗೇಜ್ ತಪಾಸಣಾ ಪ್ರಕ್ರಿಯೆಗಳಿಗೆ ಸರತಿ ಸಾಲಿನಲ್ಲಿ ನಿಲ್ಲುವುದು ಮಾತ್ರ ತಪ್ಪುತ್ತಿತ್ತು. ಅಧಿಕಾರಿಗಳಿಗೆ ಮೀಸಲಾದ ಗೇಟ್‌ನಲ್ಲಿ ಕರೆದೊಯ್ದು ಅವರನ್ನು ತಪಾಸಣೆಗೊಳಪಡಿಸಿ ಬಳಿಕ ಬೋರ್ಡಿಂಗ್ ಪ್ರದೇಶಕ್ಕೆ ಬಿಟ್ಟು ಪೊಲೀಸರು ಮರಳುತ್ತಿದ್ದರು. ಇದರ ಹೊರತು ವಿಶೇಷ ಸೌಲಭ್ಯವಿರಲಿಲ್ಲ. ಅಲ್ಲದೆ, ಅಧಿಕಾರಿಗಳಿಗೆ ಹೊರತುಪಡಿಸಿದರೆ ಅವರ ಕುಟುಂಬದವರಿಗೆ ನೆರವು ನೀಡಬೇಕಾದರೆ ಹಿರಿಯ ಅಧಿಕಾರಿಗಳಿಗೆ ಪೊಲೀಸರು ಪೂರ್ವಾನುಮತಿ ಪಡೆಯಬೇಕಿತ್ತು ಎಂದು ತಿಳಿದು ಬಂದಿದೆ.

ಐಎಎಸ್‌-ಐಪಿಎಸ್ ಶಿಷ್ಟಾಚಾರ

ರಾಜ್ಯದಲ್ಲಿ ಹಿರಿಯ ಐಎಎಸ್‌, ಐಪಿಎಸ್ ಹಾಗೂ ಐಎಫ್ಎಸ್‌ ಅಧಿಕಾರಿಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೊಕಾಲ್‌) ಸೌಲಭ್ಯವಿದೆ. ಪ್ರಧಾನ ಕಾರ್ಯದರ್ಶಿ ಮೇಲ್ಮಟ್ಟದ ಐಎಎಸ್‌, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಮಟ್ಟದ ಐಪಿಎಸ್‌ ಅಧಿಕಾರಿಗಳು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿ ಮಟ್ಟದ ಐಎಫ್‌ಎಸ್‌ ಅಧಿಕಾರಿಗಳಿಗೆ ಶಿಷ್ಟಾಚಾರ ಸೌಲಭ್ಯವಿದೆ. ಈ ಅಧಿಕಾರಿಗಳಿಗೆ ತಪಾಸಣೆ ಇದ್ದರೂ ಸುಲಭವಾಗಿ ಬೋರ್ಡಿಂಗ್ ಪಡೆಯಬಹುದು.

ನೆರವು ಸೇವೆ ಸಿಬ್ಬಂದಿ ಠಾಣೆ ಕೆಲಸಕ್ಕೆ

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಪೊಲೀಸ್ ನೆರವು ದುರುಪಯೋಗದ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಮಾನ ನಿಲ್ದಾಣ ಠಾಣೆ ಪೊಲೀಸರು ನೀಡುತ್ತಿದ್ದ ನೆರವು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕೆಲಸಕ್ಕೆ ನಿಯೋಜಿಸಿದ್ದ ಸಿಬ್ಬಂದಿಯನ್ನು ಠಾಣೆ ಕೆಲಸಗಳಿಗೆ ಬಳಸಲಾಗುತ್ತಿದೆ. ನಿಯಮಾನುಸಾರ ಶಿಷ್ಟಾಚಾರ ವಿಚಾರವನ್ನು ಸಿಬ್ಬಂದಿ ಮತ್ತು ಆಡಳಿತ ಸೇವಾ ಇಲಾಖೆ (ಡಿಪಿಎಆರ್‌) ನಿರ್ವಹಿಸಲಿದೆ.

-ಬಿ.ರಮೇಶ್, ಜಂಟಿ ಪೊಲೀಸ್ ಆಯುಕ್ತ (ಪೂರ್ವ), ಬೆಂಗಳೂರು

ಮೂವರಿಗೆ ವರ್ಗಾವಣೆ ಸಾಧ್ಯತೆ?

ಕೆಐಎನಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೆರವು ನೀಡುತ್ತಿದ್ದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಠಾಣೆಯ ಮೂವರು ಕಾನ್‌ಸ್ಟೇಬಲ್‌ಗಳ ಎತ್ತಂಗಡಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದ ವಿಚಾರಣೆ ಮುಗಿದ ಬಳಿಕ ವಿಮಾನ ನಿಲ್ದಾಣ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಬಸವರಾಜ್‌, ಮಹಾಂತೇಶ್ ಹಾಗೂ ವೆಂಕಟ್‌ರಾಜು ಅವರನ್ನು ಬೇರೆಡೆ ವರ್ಗಾವಣೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಈ ಮೂವರು ಪೊಲೀಸರು ಡಿಆರ್‌ಐ ತನಿಖೆ ಎದುರಿಸಿದ್ದರು.