ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಅಡಿ ಸಂಘ ನೋಂದಾಯಿಸಿ

| N/A | Published : May 16 2025, 09:28 AM IST

karnataka highcourt
ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಅಡಿ ಸಂಘ ನೋಂದಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಸಮುಚ್ಛಯದ (ಅಪಾರ್ಟ್‌ಮೆಂಟ್‌) ಫ್ಲಾಟ್‌ಗಳ ಮಾಲೀಕರ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆಯಡಿ (ಕೆಒಎ) ನೋಂದಾಯಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

 ಬೆಂಗಳೂರು : ವಸತಿ ಸಮುಚ್ಛಯದ (ಅಪಾರ್ಟ್‌ಮೆಂಟ್‌) ಫ್ಲಾಟ್‌ಗಳ ಮಾಲೀಕರ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆಯಡಿ (ಕೆಒಎ) ನೋಂದಾಯಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಯಲಹಂಕದ ಆವಲಹಳ್ಳಿಯ ರಾಮ್‌ಕಿ ಒನ್‌ ನಾರ್ತ್‌ ಅಪಾರ್ಟ್‌ಮೆಂಟ್‌ನ ರೇಖಾ ಕಣ್ಣನ್‌ ಸೇರಿದಂತೆ 5 ಫ್ಲಾಟ್‌ಗಳ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರ ಪೀಠ ಆದೇಶಿಸಿದೆ. ರಾಮ್ಕಿ ಒನ್ ನಾರ್ತ್ ಅಪಾರ್ಟ್‌ಮೆಂಟ್ ಮಾಲೀಕರ ಸಹಕಾರ ಸಂಘವನ್ನು ಕರ್ನಾಟಕ ಸಹಕಾರ ಸೊಸೈಟಿಗಳ (ಕೆಸಿಎಸ್‌) ಕಾಯ್ದೆಯಡಿ 2023ರ ಅ.19ರಂದು ನೋಂದಣಿ ಮಾಡಿಕೊಂಡು ಉಪ ರಿಜಿಸ್ಟ್ರಾರ್‌ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಹಾಗೆಯೇ, ರಾಮ್‌ಕಿ ನಾರ್ತ್‌ ಹೆಸರಿನಲ್ಲಿ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯ್ದೆ (ಕೆಎಒ) ಅಡಿ ನೋಂದಣಿ ಮಾಡಿಸುವಂತೆ ರಾಮ್‌ ಕಿ ಎಸ್ಟೇಟ್‌ ಫಾರ್ಮ್ಸ್‌ ಲಿಮಿಟೆಡ್‌ಗೆ ನಿರ್ದೇಶಿಸಿದೆ.

ವಸತಿ ಅಪಾರ್ಟ್‌ಮೆಂಟ್‌ಗಳಿಗೇ ಕೆಎಒ ಕಾಯ್ದೆ ರೂಪಿಸಲಾಗಿದೆ. ಆಸ್ತಿಯನ್ನು ಅಥವಾ ಫ್ಲಾಟ್‌ಗಳನ್ನು ವಸತಿ ಉದ್ದೇಶಕ್ಕೆ ಮಾತ್ರ ಬಳಸುವುದಾದರೆ ಆಗ ಕೆಎಒ ಅನ್ವಯವಾಗುತ್ತದೆ. ಅರ್ಜಿದಾರರ ಫ್ಲಾಟ್‌ಗಳ ಕ್ರಯಪತ್ರಗಳನ್ನು ಗಮನಿಸಿದರೆ ಇಡೀ ಯೋಜನೆ ವಸತಿ ಬಳಕೆಯ ಉದ್ದೇಶವಾಗಿದೆ. ಯೋಜನೆಯ ಯಾವುದೇ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಹಾಗಾಗಿ, ಸಹಕಾರ ಸಂಘಗಳ ಕಾಯ್ದೆ ಈ ವಿಚಾರದಲ್ಲಿ ಅನ್ವಯಿಸಲ್ಲ. ಕೆಸಿಎಸ್‌ ಅಡಿ ವಸತಿ ಸಮುಚ್ಛಯಗಳ ಸಂಘ ನೋಂದಣಿಗೆ ಅವಕಾಶವಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಬೆಂಗಳೂರು ಉತ್ತರದ ಯಲಹಂಕ ತಾಲೂಕಿನ ಆವಲಹಳ್ಳಿ ಗ್ರಾಮದಲ್ಲಿರುವ ರಾಮ್ಕಿ ಒನ್ ನಾರ್ತ್ ವಸತಿ ಅಪಾರ್ಟ್‌ಮೆಂಟ್‌ ಫ್ಲಾಟ್‌ಗಳ ಮಾಲೀಕರಾಗಿದ್ದಾರೆ. ಎಲ್ಲ ಅಪಾರ್ಟ್‌ಮೆಂಟ್‌ ಮಾಲೀಕರ ಒಪ್ಪಿಗೆಯಿಲ್ಲದೆ ಕೆಲ ಫ್ಲಾಟ್‌ಗಳ ಮಾಲೀಕರು ‘ರಾಮ್ಕಿ ನಾರ್ತ್’ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘವನ್ನು 2023ರ ಅ.19ರಂದು ನೋಂದಾಯಿಸಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ಸಂಘವನ್ನು ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ದೆಯಡಿ ನೋಂದಣಿ ಮಾಡಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು.