ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ

| N/A | Published : Sep 25 2025, 05:26 AM IST

SL Bhyrappa Novels
ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ (94) ವಯೋಸಹಜ ಅನಾರೋಗ್ಯದಿಂದ ಬುಧವಾರ ಬೆಂಗಳೂರಲ್ಲಿ ನಿಧನರಾದರು.

 ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ (94) ವಯೋಸಹಜ ಅನಾರೋಗ್ಯದಿಂದ ಬುಧವಾರ ಬೆಂಗಳೂರಲ್ಲಿ ನಿಧನರಾದರು. 1 ವಾರದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಆರ್‌.ಆರ್‌.ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭೈರಪ್ಪ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಸರಸ್ವತಿ ಮತ್ತು ಪುತ್ರರಾದ ಉದಯಶಂಕರ್‌, ರವಿಶಂಕರ್‌ ಅವರನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ

ಮೈಸೂರಿಗೆ ರವಾನೆ

ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆವರೆಗೆ ಗಣ್ಯರಿಗೆ, ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಕಲಾಮಂದಿರಕ್ಕೆ ತೆಗೆದುಕೊಂಡು ಹೋಗಿ ಸಂಜೆ 5.30ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಾಮುಂಡಿ ಬೆಟ್ಟದ

ತಪ್ಪಲಲ್ಲಿ ಅಂತ್ಯಕ್ರಿಯೆ

ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಹಿಂದು ಧಾರ್ಮಿಕ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.

ಭವಿಷ್ಯದ ಪೀಳಿಗೆಗೆ ಸ್ಫೂರ್ತಿ

ಕನ್ನಡ ಸಾಹಿತ್ಯದ ಅತ್ಯುನ್ನತ ವ್ಯಕ್ತಿ ಭೈರಪ್ಪ ನಿಧನದಿಂದ ದುಃಖವಾಗಿದೆ. ಸಾಹಿತ್ಯ, ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಬೌದ್ಧಿಕ ವಿಚಾರಣೆಯ ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ಪರಂಪರೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಕುಟುಂಬ, ಅಭಿಮಾನಿಗಳು ಮತ್ತು ಓದುಗರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.

ದ್ರೌಪದಿ ಮುರ್ಮು, ರಾಷ್ಟ್ರಪತಿ

ಕಾಲಾತೀತ ಚಿಂತಕ

ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.

ನರೇಂದ್ರ ಮೋದಿ, ಪ್ರಧಾನಿ

ಸಾಹಿತ್ಯಲೋಕ ಬಡವಾಗಿದೆ

ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್. ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Read more Articles on