ಸಾರಾಂಶ
ಪುಣೆ: ಪರಿಸರದ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿದ್ದು, ತಮ್ಮ ಜೀವನವಿಡೀ ವಿದ್ಯುತ್ ಬಳಸದೆ ಇದ್ದ ಡಾ. ಹೇಮಾ ಸಾಣೆ ಅವರು ಸೆ.19ರ ಶುಕ್ರವಾರ ಸಾವನ್ನಪ್ಪಿದ್ದಾರೆ.ಸಾಣೆ ಅವರು ಪರಿಸರ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದ ಕಾರಣ ಅವರು ತಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿರಲಿಲ್ಲ.
ಸೀಮೆಎಣ್ಣೆಯ ಬುಡ್ಡಿ ದೀಪಗಳ ಬೆಳಕಿನಲ್ಲಿ ವ್ಯಾಸಂಗ ಮಾಡಿ ಪಿಎಚ್‌ಡಿ ಪಡೆದಿದ್ದರು. ‘ನಮ್ಮ ಹಿಂದಿನವರೆಲ್ಲರೂ ಸಹ ವಿದ್ಯುತ್ ಇಲ್ಲದೆಯೇ ಜೀವನ ಕಳೆದಿದ್ದಾರೆ. ನಾವೂ ಸಹ ವಿದ್ಯುತ್ ಇಲ್ಲದೇ ಜೀವಿಸುತ್ತೇವೆ’ ಎಂದು ಹೇಳಿದ್ದರು. ಇವರು 1962ರಿಂದ 2000 ಇಸವಿ ವರೆಗೆ ಪುಣೆಯ ಗರ್ವಾರೆ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಉಪನ್ಯಾಸಕರಾಗಿದ್ದರು. ಇದಿಷ್ಟೇ ಅಲ್ಲದೆ ಹಲವಾರು ಪುಸ್ತಕಗಳಿಗೂ ಲೇಖಕಿಯಾಗಿದ್ದರು.
ಹೇಮಾ ಅವರು ಯಾವುದೇ ಆಡಂಬರವನ್ನು ಹತ್ತಿರಕ್ಕೆ ಸೇರಿಸದೆ, ಕೇವಲ 2 ಸೀರೆ ಮತ್ತು ವಿಶೇಷ ಕಾರ್ಯಕ್ರಮಗಳಿಗೆಂದು ಕೆಲ ಸೀರೆಯಲ್ಲಿ ಜೀವನ ನಡೆಸುತ್ತಿದ್ದರು. ತಮ್ಮ ಪೂರ್ವಜರು ವಾಸಿಸುತ್ತಿದ್ದ ಹಳೆಯ ಮನೆಯ ಒಂದು ಕೋಣೆಯಲ್ಲಿ ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು ಎಂದು ಇವರ ಶುಶ್ರೂಶಕ ಹೇಳಿದ್ದಾರೆ.