ಕಳೆದ 2016ರಲ್ಲಿ ರೂಪಿಸಲಾಗಿದ್ದ ಮೆಜೆಸ್ಟಿಕ್‌ನಲ್ಲಿ ಬಹುಮಹಡಿ ಇಂಟರ್‌ ಮಾಡೆಲ್‌ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ಯೋಜನೆ ಜಾರಿ ಸಂಬಂಧ ತಾಂತ್ರಿಕ ಸಲಹೆಗಾರರನ್ನು ನೇಮಿಸಲು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ 

ಬೆಂಗಳೂರು : ಕಳೆದ 2016ರಲ್ಲಿ ರೂಪಿಸಲಾಗಿದ್ದ ಮೆಜೆಸ್ಟಿಕ್‌ನಲ್ಲಿ ಬಹುಮಹಡಿ ಇಂಟರ್‌ ಮಾಡೆಲ್‌ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ಯೋಜನೆ ಜಾರಿ ಸಂಬಂಧ ತಾಂತ್ರಿಕ ಸಲಹೆಗಾರರನ್ನು ನೇಮಿಸಲು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಮಲಿಂಗಾರೆಡ್ಡಿ, ಮೆಜೆಸ್ಟಿಕ್‌ನಲ್ಲಿ ಕೆಎಸ್ಸಾರ್ಟಿಸಿಗೆ ಸೇರಿದ 40 ಎಕರೆ ಜಾಗವಿದೆ. ಅದರಲ್ಲಿ ಸ್ವಲ್ಪಭಾಗ ನಮ್ಮ ಮೆಟ್ರೋಗೆ ನೀಡಲಾಗಿದೆ. ಉಳಿದ ಭಾಗದಲ್ಲಿ ಬಹುಮಹಡಿ ಇಂಟರ್‌ಮಾಡೆಲ್‌ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 2016ರಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತಾದರೂ, ಕಾರಣಾಂತರಗಳಿಂದ ಅನುಷ್ಠಾನಗೊಂಡಿರಲಿಲ್ಲ. ಇದೀಗ ರಾಜ್ಯ ಬಜೆಟ್‌ನಲ್ಲೂ ಯೋಜನೆ ಅನುಷ್ಠಾನ ಕುರಿತು ಘೋಷಣೆ ಮಾಡಲಾಗಿದ್ದು, ಅದರಂತೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಪ್ರತಿದಿನ 3 ಸಾವಿರ ಬಸ್‌ಗಳು ಸೇವೆ ನೀಡುತ್ತಿವೆ, ಬಿಎಂಟಿಸಿಯಿಂದ 10 ಸಾವಿರ ಟ್ರಿಪ್‌ಗಳನ್ನು ಬಸ್‌ಗಳು ನಡೆಸುತ್ತವೆ. ಹೀಗಾಗಿ ಬಸ್‌ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ಗಮನಿಸಿ ಬಹುಮಹಡಿ ಇಂಟರ್‌ಮಾಡೆಲ್‌ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅದರಲ್ಲಿ ಬಸ್‌ ನಿಲ್ದಾಣ, ಕಾರ್ಯಾಗಾರ, ಘಟಕಗಳು ಕಟ್ಟಡದ ವಿವಿಧ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಉಳಿದ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಬಹುಮಹಡಿ ಇಂಟರ್‌ಮಾಡೆಲ್‌ ಸಾರಿಗೆ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿ ತಾಂತ್ರಿಕ ಸಲಹೆಗಾರರನ್ನು ನೇಮಿಸಲು ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಮ್ಮೆ ತಾಂತ್ರಿಕ ಸಲಹೆಗಾರರು ನೇಮಕವಾದರೆ ಅವರು ಮುಂದಿನ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಅದಾದ ನಂತರ ಯೋಜನೆ ಜಾರಿಗೆ ಖಾಸಗಿ ಗುತ್ತಿಗೆ ಸಂಸ್ಥೆ ನೇಮಿಸಲಾಗುವುದು. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.