ಎಪಿಎಂಸಿಗಳಲ್ಲಿನ್ನು ಸಾವಯವ ಉತ್ಪನ್ನ ಮಾರಾಟ - ಮುಂದಿನ ಆರ್ಥಿಕ ವರ್ಷದಿಂದ ವ್ಯವಸ್ಥೆ

| Published : Jan 24 2025, 11:24 AM IST

Vegetable Vendor

ಸಾರಾಂಶ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರ ಸಿರಿಧಾನ್ಯ ಕೃಷಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು :  ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರ ಸಿರಿಧಾನ್ಯ ಕೃಷಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿರುವ ಮೂರು ದಿನಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-2025 ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅಂದಾಜು 903.61 ಲಕ್ಷ ಟನ್‌ಗಳಷ್ಟು ಸಿರಿಧಾನ್ಯಗಳ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ.38.50ರಷ್ಟು ಪಾಲು ಭಾರತದ್ದಾಗಿದೆ. ದೇಶದ ಒಟ್ಟು ಸಾವಯವ ರಫ್ತು ಪ್ರಮಾಣ 2.61 ಲಕ್ಷ ಟನ್ ಆಗಿದ್ದು, ಈ ಪೈಕಿ ಸಾವಯವ ಆಹಾರ ರಫ್ತಿನಿಂದ ಸುಮಾರು 4008 ಕೋಟಿ ರು.ಗಳಷ್ಟು ಆದಾಯವಿದೆ ಎಂದರು.

ಸಾವಯವ ಮತ್ತು ಸಿರಿಧಾನ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಸರಬರಾಜು ಸರಪಳಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಪರಿಷ್ಕೃತ ‘ಸಾವಯವ ಕೃಷಿ ನೀತಿ’ಯನ್ನು ನಮ್ಮ ಸರಕಾರವು 2017ರಲ್ಲಿ ಹೊರತಂದಿದೆ. ರಾಜ್ಯದ ರೈತರಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ‘ಸಾವಯವ ಭಾಗ್ಯ’ ಯೋಜನೆಯನ್ನು 2013ನೇ ಸಾಲಿನಲ್ಲಿ ಹೊರತಂದು, ಹೋಬಳಿ ಮಟ್ಟದಲ್ಲಿ ಮಾದರಿ ಸಾವಯವ ಗ್ರಾಮಗಳನ್ನು ಸ್ಥಾಪಿಸಿ ರೈತರನ್ನು ಒಗ್ಗೂಡಿಸಿ ಉತ್ತೇಜಿಸಲಾಗಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರ ರೈತರ ಪಂಪ್‌ಸೆಟ್‌ಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಸಹಾಯಧನದೊಟ್ಟಿಗೆ ಅನೇಕ ಸೌಲಭ್ಯಗಳನ್ನು ರೈತರಿಗೆ ಕೊಡಲಾಗುತ್ತಿದೆ. ಈ ಉಚಿತ ವಿದ್ಯುತ್ತಿನ ಬೆಲೆಯನ್ನು ರೈತರು ಅರಿಯಬೇಕು. ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳು ನೀರಿನ ಬಳಕೆ ಶುಲ್ಕದ ಮರು ಅನುಷ್ಠಾನದ ಕುರಿತು ಕೇಂದ್ರದ ಗಮನ ಸೆಳೆದಿವೆ. ಈ ಬಗ್ಗೆ ಕಾಯ್ದೆಯನ್ನು ತರಲು ಮುಂದಾಗಿವೆ. ಹೀಗೆ ಮಾಡಿದಾಗ ನೀರಿನ ಬೆಲೆ ಎಲ್ಲರಿಗೂ ಅರ್ಥವಾಗುತ್ತದೆ ಎಂದರು.

ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಸಿರಿಧಾನ್ಯ ಹೆಚ್ಚು ಪೋಷಕಾಂಶ ಮತ್ತು ನಾರಿನಿಂದ ಕೂಡಿದ್ದು, ಅತ್ಯಂತ ಕಡಿಮೆ ನೀರಿನಿಂದ ಬೆಳೆಯಬಹುದು. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯವು ಇಂದು ಉಳ್ಳವರ ಆಹಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಬಿ.ಎಸ್‌. ಸುರೇಶ್, ಹೊಸದುರ್ಗ ಶಾಸಕ ಗೋವಿಂದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಿಲೇಟ್‌ ಹಬ್‌ಗೆ ಶಂಕು ಸ್ಥಾಪನೆ:

ಹೆಬ್ಬಾಳದಲ್ಲಿ ಅಂದಾಜು 20 ಕೊಟಿ ರು.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ‘ಸಾವಯವ ಮತ್ತು ಸಿರಿಧಾನ್ಯ ಹಬ್‌ಗೆ (ಮಿಲೇಟ್‌ ಹಬ್‌)’ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಕೃಷಿ ಇಲಾಖೆಯ ಶತ ಸಂಭ್ರಮ ಸ್ವಾವಲಂಬನೆಯಿಂದ ಸಮೃದ್ಧಿಯೆಡೆಗೆ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿವಿ

ಮಂಡ್ಯ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೃಷಿ ಪ್ರಧಾನ ಜಿಲ್ಲೆಯಾದ ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಯಿಂದ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಭಾಗದ ರೈತರಿಗೆ ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆಯಲಿದೆ ಎಂದರು.

ಹೊಸ ಆಕರ್ಷಣೆ ‘ಮಿಲಿ’

ಮೇಳದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆಯ ‘ಮಿಲಿ’ ಮತ್ತೊಂದು ಆಕರ್ಷಣೆ. ಅಂತಾರಾಷ್ಟ್ರೀಯ ಮೇಳಕ್ಕಾಗಿಯೇ ಈ ವಿಶೇಷ ತಂತ್ರಜ್ಞಾನ ರೂಪಿಸಿ ಬಿಡುಗಡೆ ಮಾಡಲಾಗಿದೆ. ಮೇಳದ ಮುಂಭಾಗದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸುತ್ತಾಡಿದ ಕಡೆಗೆಲ್ಲಾ ಮಿಲಿ ಅದರ ವಿವರಣೆ ನೀಡುತ್ತಾ ಪರಿಚಯ ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಕಾರ್ಯಾಗಾರಗಳು, ಚಟುವಟಿಕೆಗಳು, ವೇಳಾಪಟ್ಟಿ, ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಅಲ್ಲದೆ ಸ್ಟಾಲ್‌ಗಳು, ಆಹಾರ ಮಳಿಗೆಗಳ ಬಗ್ಗೆಯೂ ಮಿಲಿ ಮಾರ್ಗದರ್ಶನ ಸಹಕಾರಿಯಾಗಿದೆ.