ಗ್ಯಾರಂಟಿಗಾಗಿ ಎಸ್ಸಿ ಕಲ್ಯಾಣ ನಿಗಮ ಅನುದಾನಕ್ಕೂ ಕತ್ತರಿ - ಶೇ.25ರಷ್ಟು ಅನುದಾನವನ್ನೂ ಬಿಡುಗಡೆ ಮಾಡಿಲ್ಲ

| N/A | Published : Feb 24 2025, 10:51 AM IST / Updated: Feb 24 2025, 10:53 AM IST

Vidhan soudha

ಸಾರಾಂಶ

ಗ್ಯಾರಂಟಿ ಯೋಜನೆಗಳಿಗೆ ಆದಾಯ ಹೊಂದಿಸಲು ರಾಜ್ಯ ಸರ್ಕಾರ, ನಿಗಮಗಳಿಗೆ ಹಂಚಿಕೆ ಮಾಡಲಾದ ಅನುದಾನ ಕಡಿತಗೊಳಿಸಿದೆ.

 ಗಿರೀಶ್‌ ಗರಗ

  ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಆದಾಯ ಹೊಂದಿಸಲು ರಾಜ್ಯ ಸರ್ಕಾರ, ನಿಗಮಗಳಿಗೆ ಹಂಚಿಕೆ ಮಾಡಲಾದ ಅನುದಾನ ಕಡಿತಗೊಳಿಸಿದೆ. ಅದರಲ್ಲೂ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಡುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಂಡು ಸಂಬಂಧಪಟ್ಟ ನಿಗಮಗಳಿಗೆ ಅನುದಾನ ನೀಡುವಲ್ಲಿ ಹಿಂದೆ ಬಿದ್ದಿದೆ.

ಗ್ಯಾರಂಟಿ ಯೋಜನೆಗಳ ಜಾರಿ ನಂತರದಿಂದ ರಾಜ್ಯದಲ್ಲಿ ಅನುದಾನಕ್ಕಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶಾಸಕರು ಅನುದಾನದ ವಿಚಾರವಾಗಿ ಕೆಲವೊಮ್ಮೆ ಬಹಿರಂಗ ಹೇಳಿಕೆಗಳನ್ನೂ ನೀಡಿದ್ದಾರೆ. ಅಲ್ಲದೆ ಬಹುತೇಕ ನಿಗಮ, ಮಂಡಳಿಗಳ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಅದರಲ್ಲೂ ಸಮಾಜ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಜಾತಿವಾರು ನಿಗಮ ಮತ್ತು ಆಯೋಗಗಳಿಗೆ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.25ರಷ್ಟು ಅನ್ನೂ ಬಿಡುಗಡೆ ಮಾಡಿಲ್ಲ.

332.53 ಕೋಟಿ ಹಂಚಿಕೆ:

2024-25ನೇ ಸಾಲಿಗೆ ಪರಿಶಿಷ್ಟ ಜಾತಿ ಕಲ್ಯಾಣಕ್ಕೆ ಸಂಬಂಧಿಸಿದ 6 ನಿಗಮಗಳು ಹಾಗೂ ಎರಡು ಆಯೋಗಗಳಿಗೆ ಫೆ.17ರ ವೇಳೆಗೆ ಒಟ್ಟಾರೆ 332.53 ಕೋಟಿ ರು. ಹಂಚಿಕೆ ಮಾಡಲಾಗಿತ್ತು. ಆದರೆ, ಅದರಲ್ಲಿ ಕೇವಲ 88.78 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಆ ಮೊತ್ತದಲ್ಲಿ 85.35 ಕೋಟಿ ರು. ಮಾತ್ರ ನಿಗಮಗಳು ಮತ್ತು ಆಯೋಗಗಳು ವ್ಯಯಿಸಿವೆ. ಅದರಲ್ಲೂ 6 ನಿಗಮಗಳಿಗೆ ಹಂಚಿಕೆ ಮಾಡಲಾದ ಅನುದಾನದ ಪೈಕಿ ಶೇ. 25ರಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಅಷ್ಟೂ ಮೊತ್ತವನ್ನು ನಿಗಮಗಳು ವ್ಯಯಿಸಿವೆ. ಒಟ್ಟಾರೆ ಹಂಚಿಕೆಗೆ ಹೋಲಿಸಿದರೆ ನಿಗಮ ಮತ್ತು ಆಯೋಗಗಳ ಆರ್ಥಿಕ ಸಾಧನೆ ಶೇ. 25.66ರಷ್ಟಾಗಿದೆ.

ಫಲಾನುಭವಿಗಳಿಗೆ ಸಿಗದ ಫಲ: ಪರಿಶಿಷ್ಟ ಜಾತಿ ನಿಗಮಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಎಸ್‌ಸಿಎಸ್‌ಪಿ/ಟಿಎಸ್‌ಪಿಯಲ್ಲಿ ಮೀಸಲಿಟ್ಟ ಹಣವನ್ನು ಅನುದಾನವನ್ನಾಗಿ ನೀಡುತ್ತದೆ. ಹೀಗೆ ನಿಗಮಗಳಿಗೆ ದೊರೆಯುವ ಅನುದಾನದಿಂದ ನಿರ್ದಿಷ್ಟ ಜಾತಿಯವರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಅದರಂತೆ ಗಂಗಾ ಕಲ್ಯಾಣ, ಐರಾವತ ವಾಹನ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌, ವಿದೇಶದಲ್ಲಿ ಉನ್ನತ ವ್ಯಾಸಂಗ, ಪ್ರೇರಣಾ (ಮೈಕ್ರೋ ಫೈನಾನ್ಸ್‌) ಕಿರು ಸಾಲ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ, ಈ ಬಾರಿ ಅನುದಾನ ಕಡಿತದಿಂದಾಗಿ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರೆಯದಂತಾಗಿದೆ.

ಅನುದಾನ ಹಂಚಿಕೆ, ಬಿಡುಗಡೆ, ವೆಚ್ಚದ ವಿವರ (ಕೋಟಿ ರು.ಗಳಲ್ಲಿ):

ನಿಗಮ/ಆಯೋಗ ಹಂಚಿಕೆ ಬಿಡುಗಡೆ ವೆಚ್ಚ ಶೇಕಡಾವಾರು ಸಾಧನೆ

ಡಾ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ 100 25 25 25

ತಾಂಡ ಅಭಿವೃದ್ಧಿ ನಿಗಮ 60 15 15 25

ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ 35 8.75 8.75 25

ರಾಜ್ಯ ಸಫಾಯಿ ಕರ್ಮಚಾರಿ ಆಯೋಗ 3.75 3.75 1.76 47.02

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ 3.78 3.78 2.33 61.68

ಭೋವಿ ಅಭಿವೃದ್ದಿ ನಿಗಮ 55 13.75 13.75 25

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ 50 12.50 12.50 25

ಒಟ್ಟು 332.53 88.78 85.35 25.66

ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಕೆ: ಛಲವಾದಿ ಆಕ್ರೋಶ 

ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಬಾರದು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗೆ ರೂಪಿಸಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ವಿಶೇಷ ಯೋಜನೆಯ 25.426 ಕೋಟಿ ರು. ಅನ್ನು ಕಾನೂನುಬಾಹಿರವಾಗಿ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಪರಿಶಿಷ್ಟರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಲು ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ 52 ಸಾವಿರ ಕೋಟಿ ರು. ಮೀಸಲಿಟ್ಟಿದ್ದರೂ 2023-24 ಮತ್ತು 2024-25ರಲ್ಲಿ ಕ್ರಮವಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ವಿಶೇಷ ಯೋಜನೆಯ 11,144 ಮತ್ತು 14,282 ಕೋಟಿ ರು. ಅನ್ನು ಕಾನೂನುಬಾಹಿರವಾಗಿ ಅನ್ಯ ಉದ್ದೇಶಕ್ಕೆ, ಅಂದರೆ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

52 ಸಾವಿರ ಕೋಟಿ ಎಲ್ಲಿ ಹೋಯಿತು?: ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಕಾನೂನುಬಾಹಿರವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದರೂ ಪರಿಶಿಷ್ಟರ ಹಣ ಬಳಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಪರಿಶಿಷ್ಟರಿಗಾಗಿ ಮೀಸಲಿಟ್ಟ ಹಣದಲ್ಲೇ ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯಿಸುವುದಾದರೆ ಆಯವ್ಯಯದಲ್ಲಿ ಮೀಸಲಿಟ್ಟ 52 ಸಾವಿರ ಕೋಟಿ ರು.ಗೂ ಅಧಿಕ ಹಣ ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಳು ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಜೀವಾಳ. ಈ ಯೋಜನೆಗಳ ಹಣವನ್ನು ಅನ್ಯ ಯೋಜನೆಗಳಿಗೆ ಬಳಸುವುದು ಈ ಸಮುದಾಯಗಳ ಅಭಿವೃದ್ಧಿ ಮೊಟಕುಗೊಳಿಸುತ್ತದೆ. ಆದ್ದರಿಂದ ಮುಂಬರುವ ಆಯವ್ಯದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ಅವರು ಆಗ್ರಹಿಸಿದ್ದಾರೆ.