ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಕೊಲೆ ಆರೋಪಿಗೆ ‘ಹುಡುಕಾಟ’! - ಆರೋಪಪಟ್ಟಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದ ಆರೋಪಿ

| Published : Nov 11 2024, 05:53 AM IST

Karnataka highcourt
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಕೊಲೆ ಆರೋಪಿಗೆ ‘ಹುಡುಕಾಟ’! - ಆರೋಪಪಟ್ಟಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದ ಆರೋಪಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಶಕಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯೊಬ್ಬನ ಹೆಸರಿನಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ನಿಜವಾದ ಆರೋಪಿ ಯಾರೆಂದು ಪತ್ತೆ ಹಚ್ಚುವ ಹೊಣೆಯನ್ನು ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ಮೇಲೆ ಹೊರಿಸಿ ಹೈಕೋರ್ಟ್‌ ಇದೀಗ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಎರಡು ದಶಕಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯೊಬ್ಬನ ಹೆಸರಿನಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ನಿಜವಾದ ಆರೋಪಿ ಯಾರೆಂದು ಪತ್ತೆ ಹಚ್ಚುವ ಹೊಣೆಯನ್ನು ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ಮೇಲೆ ಹೊರಿಸಿ ಹೈಕೋರ್ಟ್‌ ಇದೀಗ ಆದೇಶಿಸಿದೆ.

ಪ್ರಕರಣದಲ್ಲಿ 16ನೇ ಆರೋಪಿ ಯಾರೆಂಬ ಬಗ್ಗೆ ಜಿಜ್ಞಾಸೆ ಮೂಡಿದೆ. ಪೊಲೀಸರು ಓರ್ವನ ಮೇಲೆ ದೋಷಾರೋಪ ಹೊರಿಸಿದ್ದಾರೆ. ಆದರೆ ದೋಷಾರೋಪ ಹೊತ್ತ ಆರೋಪಿ, ನಾನು ನಿಜವಾದ ಆರೋಪಿಯಲ್ಲ. ಅಪರಾಧ ಎಸಗಿರುವವನು ಹೊರಗಡೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾನೆ. ಪೊಲೀಸರು ಮಾತ್ರ ನನ್ನನ್ನೇ ಆರೋಪಿ ಎನ್ನುತ್ತಿದ್ದಾರೆ. ಹಾಗಾಗಿ, ನಿಜವಾದ ಆರೋಪಿಯನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೊರೆಯಿಟ್ಟಿದ್ದ.

ಈ ವಿಚಿತ್ರ ಸನ್ನಿವೇಶವನ್ನು ಗಂಭೀರವಾಗಿಯೇ ಪರಿಗಣಿಸಿದ ಹೈಕೋರ್ಟ್‌, ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಓರ್ವ ನಿರಪರಾಧಿಯೂ ಶಿಕ್ಷೆಗೆ ಒಳಗಾಗಬಾರದು ಎಂಬುದಾಗಿ ಅಪರಾಧಿಕ ನ್ಯಾಯಶಾಸ್ತ್ರ ಹೇಳುತ್ತದೆ. ಇದರಿಂದ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಬೇಕು ಎಂದು ಸಿಐಡಿಗೆ ಆದೇಶಿಸಿದೆ.

ನಾನವನಲ್ಲ, ನಾನವನಲ್ಲ:

ಬೆಂಗಳೂರಿನ ಜೆ.ಜೆ. ನಗರ ಪೊಲೀಸ್‌ ಠಾಣೆಯಲ್ಲಿ 2004ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 16ನೇ ಆರೋಪಿಯೆಂದು ಪಾದರಾಯನಪುರ ನಿವಾಸಿ ಸಲ್ಮಾನ್‌ ಎಂಬಾತನನ್ನು ಗುರುತಿಸಿದ್ದ ಪೊಲೀಸರು, ಆತನ ಮೇಲೆ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್‌ ಮೆಟ್ಟಿಲೆರಿದ್ದ ಸಲ್ಮಾನ್‌, ‘ನಾನು ನಿಜವಾದ ಆರೋಪಿಯಲ್ಲ. ಪೊಲೀಸರು ನನ್ನನ್ನು ಆರೋಪಿ ಎನ್ನುತ್ತಿದ್ದಾರೆ. ಪ್ರಕರಣದಲ್ಲಿ ನಿಜವಾದ ಆರೋಪಿ ಯಾರೆಂದು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಬೇಕು’ ಎಂದು ಕೋರಿದ್ದರು.

ವಿಚಾರಣೆ ವೇಳೆ ಅರ್ಜಿದಾರನ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ಹಾಜರಾಗಿ, ಅರ್ಜಿದಾರನನ್ನು ಕೊಲೆ ಪ್ರಕರಣದಲ್ಲಿ 16ನೇ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ, ನಿಜವಾದ ಆರೋಪಿ ಹೆಸರು ಅಬ್ದುಲ್‌ ಮುನಾಫ್‌. ಆತನ ತಂದೆ ಹೆಸರು ಹೈದರ್‌ ಅಲಿ. ಪೊಲೀಸರು ಮಾತ್ರ ಅರ್ಜಿದಾರನಾದ ಸಲ್ಮಾನ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸಲ್ಮಾನ್‌ ಅವರ ತಂದೆ ಹೆಸರು ಸುಹೈಲ್‌ ಅಹ್ಮದ್‌. ಇದೇ ವಿಚಾರವಾಗಿ ಹೈಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನ ಮೇರೆಗೆ ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರನೇ ನಿಜವಾದ ಆರೋಪಿ. ಸಲ್ಮಾನ್‌ ಮತ್ತು ಅಬ್ದುಲ್‌ ಮುನಾಫ್‌ ಇಬ್ಬರ ಹೆಸರು ಒಬ್ಬ ವ್ಯಕ್ತಿಯನದ್ದೇ ಎಂಬುದಾಗಿ ಪೂರಕ ವರದಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಅಲ್ಲದೆ, ಪೊಲೀಸರ ಪೂರಕ ವರದಿ ಸಂಶಯಾಸ್ಪದವಾಗಿದೆ. ಅರ್ಜಿದಾರ ಮುನಾಫ್‌, ಅಬ್ದುಲ್‌ ಮುನಾಫ್‌ ಆಗಲು ಸಾಧ್ಯವಿಲ್ಲ. ಪ್ರಕರಣದ ಮುಂದಿನ ತನಿಖೆಯನ್ನು ಬೇರೊಂದು ತನಿಖಾ ಸಂಸ್ಥೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಸರ್ಕಾರಿ ವಕೀಲರು, ಪೊಲೀಸರು ಈಗಾಗಲೇ ಅಧೀನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸಲ್ಮಾನ್‌ ಮತ್ತು ಅಬ್ದುಲ್‌ ಮುನಾಫ್‌ ಎರಡೂ ಹೆಸರು ಒಂದೇ ವ್ಯಕ್ತಿಯದ್ದಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣವನ್ನು ಹೆಚ್ಚಿನ ತನಿಖೆಯನ್ನು ಸಿಐಡಿಗೆ ವಹಿಸಬಹುದು ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಮತ್ತು 16ನೇ ಆರೋಪಿಯ ತಂದೆಯಂದಿರ ಹೆಸರುಗಳು ಬೇರೆ ಬೇರೆಯಾಗಿದೆ ಎಂಬುದು ಒಪ್ಪುವಂತಹದ್ದು. ಹೀಗಾಗಿ, ಸಲ್ಮಾನ್‌ ಅವರು ಅಬ್ದುಲ್‌ ಮುನಾಫ್‌ ಆಗಲು ಸಾಧ್ಯವಿಲ್ಲ. ನಿಜವಾದ ಆರೋಪಿಯು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾನೆ. ಆರೋಪಿಯಲ್ಲದ ವ್ಯಕ್ತಿಯು ಕೊಲೆ ಪ್ರಕರಣದ ವಿಚಾರಣೆ ಎದುರಿಸಬೇಕಾಗಿದೆ ಎಂದು ಅರ್ಜಿದಾರರ ವಕೀಲರು ಹೇಳುತ್ತಿದ್ದಾರೆ. ಇದು ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಯಾವೊಬ್ಬನಿರಪರಾಧಿ ಸಹ ಶಿಕ್ಷೆಗೆ ಒಳಗಾಗಬಾರದು ಎಂಬ ಅಪರಾಧಿಕ ನ್ಯಾಯಶಾಸ್ತ್ರ ತತ್ವಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಂತಿಮವಾಗಿ ಸಿಐಡಿಯು ಪ್ರಕರಣದ ಮುಂದಿನ ತನಿಖೆ ನಡೆಸಬೇಕು. ನಿಜವಾದ ಆರೋಪಿ ಯಾರೆಂದು ಪತ್ತೆ ಹಚ್ಚಿ ಎರಡು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ತನಿಖೆ ಸಂದರ್ಭದಲ್ಲಿ ನಿಜವಾದ ಆರೋಪಿ ಯಾರು ಎಂಬುದನ್ನು ತೀರ್ಮಾನ ಮಾಡಲು ಅರ್ಜಿಯೊಂದಿಗೆ ಅರ್ಜಿದಾರ ಸಲ್ಲಿಸಿರುವ ಆಧಾರ್ ಕಾರ್ಡ್‌ ಹಾಗೂ ಇತರೆ ಎಲ್ಲ ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿದೆ.