ಶಿವಣ್ಣ, ಅರುಂಧತಿ ನಾಗ್‌ ನಟನೆ, ಪ್ರೇಮ್‌ ನಿರ್ದೇಶನದ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ‘ಜೋಗಿ’ ಬಿಡುಗಡೆಯಾಗಿ 20 ವರ್ಷಗಳಾಗಿವೆ

ಸಿನಿವಾರ್ತೆ

ಶಿವಣ್ಣ, ಅರುಂಧತಿ ನಾಗ್‌ ನಟನೆ, ಪ್ರೇಮ್‌ ನಿರ್ದೇಶನದ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ‘ಜೋಗಿ’ ಬಿಡುಗಡೆಯಾಗಿ 20 ವರ್ಷಗಳಾಗಿವೆ. 2005 ಆ.19ಕ್ಕೆ ರಿಲೀಸ್‌ ಆದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಸ್ಯಾಂಡಲ್‌ವುಡ್‌ನ ಆವರೆಗಿನ ದಾಖಲೆಗಳನ್ನೆಲ್ಲ ಪುಡಿಗಟ್ಟಿ ಸುಮಾರು 30 ಕೋಟಿ ರು.ಗೂ ಅಧಿಕ ಕಲೆಕ್ಷನ್‌ ಮಾಡುವ ಮೂಲಕ ‘ಅತ್ಯಧಿಕ ಗಳಿಕೆ ಮಾಡಿದ ಕನ್ನಡ ಚಿತ್ರ’ ಎಂಬ ಟೈಟಲ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಆಗಲೇ ಒಂದು ಟಿಕೆಟ್‌ ಬೆಲೆ ರೂ.1250 ಗಳಿಸಿತ್ತು.

ಇದೀಗ ಈ ಸಿನಿಮಾ ಬಂದು 20 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನೂರಾರು ಮಂದಿ ಈ ಸಿನಿಮಾದೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಪರ್ಫೆಕ್ಟ್‌ ರೌಡಿಸಂನ ಕ್ಲಾಸಿಕ್‌ ಸಿನಿಮಾವಿದು. ಇಂಥಾ ಇನ್ನೊಂದು ಸಿನಿಮಾ ಬರಲು ಸಾಧ್ಯವಿಲ್ಲ’ ಎಂಬ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಮರು ಬಿಡುಗಡೆಗೂ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಕನ್ನಡಪ್ರಭ ವರದಿ ವೈರಲ್‌

‘ಜೋಗಿ’ ಸಿನಿಮಾ ಬಿಡುಗಡೆಯಾದಾಗ ಜನರ ಕ್ರೇಜ್‌ ಯಾವ ರೀತಿ ಇತ್ತು ಎಂಬುದನ್ನು ಬಿಂಬಿಸುವಂಥಾ ‘ಕನ್ನಡಪ್ರಭ’ ವರದಿಯೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ. 20 ವರ್ಷಗಳ ಹಿಂದೆಯೇ ಬ್ಲ್ಯಾಕ್‌ನಲ್ಲಿ ಈ ಸಿನಿಮಾ ಟಿಕೆಟ್‌ 1250 ರು.ಗೆ ಮಾರಾಟವಾದದ್ದನ್ನು ‘ಕನ್ನಡಪ್ರಭ’ ಪ್ರಕಟಿಸಿತ್ತು.