ರಾಜ್ಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಸರ್ಕಾರದಿಂದ ಪ್ರತ್ಯೇಕ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಸ್ಥಾಪಿಸಲಾಗುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಈ ಸಹಕಾರ ಸಂಘ ಕಾರ್ಯಾರಂಭ ಮಾಡಲಿದೆ

ಬೆಂಗಳೂರು : ರಾಜ್ಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಸರ್ಕಾರದಿಂದ ಪ್ರತ್ಯೇಕ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಸ್ಥಾಪಿಸಲಾಗುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಈ ಸಹಕಾರ ಸಂಘ ಕಾರ್ಯಾರಂಭ ಮಾಡಲಿದೆ ಎಂದು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ತಿಳಿಸಿದ್ದಾರೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ರಾಜ್ಯದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಯಮಹಲ್‌ ಪ್ಯಾಲೇಸ್‌ನಲ್ಲಿ ಏರ್ಪಡಿಸಲಾಗಿರುವ ‘ನಮ್ಮ ಸರಸ್‌ ಮೇಳ 2026’ಕ್ಕೆ ಚಾಲನೆ ನೀಡಿ ಪಾಟೀಲ್‌ ಮಾತನಾಡಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಹಾವಳಿ ಹೆಚ್ಚಾದಾಗ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿತ್ತು. ಮೈಕ್ರೋ ಫೈನಾನ್ಸ್‌ಗಳಿಂದ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯೆಯರೂ ಸಮಸ್ಯೆ ಎದುರಿಸುವಂತಾಗಿತ್ತು. ಇನ್ನು, ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಮಹಿಳಾ ಸ್ವ-ಸಹಾಯ ಸಂಘಗಳಿವೆ. ಅವುಗಳನ್ನು ಸಬಲಗೊಳಿಸುವ ಉದ್ದೇಶದಿಂದ ತಲಾ 1.50 ಲಕ್ಷ ರು. ಬಂಡವಾಳ ನಿಧಿ ನೀಡಲಾಗಿದೆ. ಅದರ ಜತೆಗೆ ಇದೀಗ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಸ್ಥಾಪಿಸುವ ಕುರಿತು ನಿರ್ಧರಿಸಲಾಯಿತು. ಅದರ ರೂಪುರೇಷೆಗಳೆಲ್ಲ ಸಿದ್ಧಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕಾರ್ಯಾರಂಭ ಮಾಡಲಿದೆ ಎಂದರು.

ಜತೆಗೆ ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಆರ್ಥಿಕ ನೆರವು ಒದಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳ ನಿರಂತರ ಮಾರಾಟಕ್ಕಾಗಿ ರೊಟೇಷನ್‌ ಮಾದರಿಯಲ್ಲಿ ಮಳಿಗೆಗಳನ್ನು ಒದಗಿಸಲು, ಬೆಂಗಳೂರು ಸಂತೆ ಎಂಬ ಕಾರ್ಯ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದನ್ನೂ ಮುಂದಿನ ಒಂದು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸಮಸ್ಯೆ ಆಲಿಸಿ:

ಅಧಿಕಾರಿಗಳು ಸರಸ್‌ ಮೇಳದಲ್ಲಿರುವ ಪ್ರತಿ ಮಳಿಗೆಗೂ ತೆರಳಿ ಅಲ್ಲಿರುವ ಮಹಿಳೆಯರಿಂದ ಸಲಹೆ ಮತ್ತು ಸಮಸ್ಯೆಗಳನ್ನು ಆಲಿಸಬೇಕು. ಅವರ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಡಬೇಕು. ಅವರ ಉತ್ಪನ್ನಗಳಿಗೆ ಅಗತ್ಯವಿರುವ ಬ್ರ್ಯಾಂಡಿಂಗ್‌, ಮಾರ್ಕೆಟ್ ಸಂಪರ್ಕ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲು ಸೂಕ್ತ ಯೋಜನೆ ರೂಪಿಸಬೇಕು. ಹಾಗೆಯೇ, ಕೌಶಲ್ಯದ ಅವಶ್ಯಕತೆಯಿದ್ದರೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭೋದ್‌ ಯಾದವ್‌, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನ, ಉದ್ಯೋಗ ಹಾಗೂ ಕೈಗಾರಿಕಾ ತರಬೇತಿ ಇಲಾಖೆ ಆಯುಕ್ತೆ ಎಂ. ಶಿಲ್ಪಾ ಇತರರಿದ್ದರು.

120 ಮಳಿಗೆಗಳಲ್ಲಿ ಉತ್ಪನ್ನಗಳ ಮಾರಾಟ:

ನಮ್ಮ ಸರಸ್‌ ಮೇಳದಲ್ಲಿ ವಿವಿಧ ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 120 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೆ. 19ರಂದು ಆರಂಭವಾಗಿರುವ ಮೇಳ ಸೆ.27ರವರೆಗೆ ನಡೆಯಲಿದೆ.

ಸ್ತ್ರೀ ಸಬಲೀಕರಣ

- ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಮಹಿಳಾ ಸ್ವ-ಸಹಾಯ ಸಂಘಗಳು

- ಅವುಗಳ ಸಬಲೀಕರಣಕ್ಕೆ ತಲಾ 1.50 ಲಕ್ಷ ರು. ಬಂಡವಾಳ ನಿಧಿ

- ಇದೀಗ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸಹಕಾರ ಸೊಸೈಟಿ

- ಸೊಸೈಟಿ ರಚನೆಯ ಎಲ್ಲ ರೂಪುರೇಷೆ ಈಗಾಗಲೇ ಸಂಪೂರ್ಣ

- ಸ್ವಸಹಾಯ ಗುಂಪುಗಳ ಉತ್ಪನ್ನ ಮಾರಾಟಕ್ಕೂ ಪ್ರತ್ಯೇಕ ಪೇಟೆ

- ಇದಕ್ಕಾಗಿ ’ಬೆಂಗಳೂರು ಸಂತೆ’ ಮುಂದಿನ ತಿಂಗಳು ಲೋಕಾರ್ಪಣೆ