ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವಕ್ಕೆ ಸಂಚಕಾರ ತರುವ ನದಿ ತಿರುವ ಯೋಜನೆಯನ್ನು ಜನಪ್ರತಿನಿಧಿಗಳು ಒಗ್ಗಟ್ಟಾಗಿ ವಿರೋಧಿಸಬೇಕು. 15 ದಿನದೊಳಗೆ ಸರ್ಕಾರದೊಂದಿಗೆ ಸಭೆ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕು

 ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವಕ್ಕೆ ಸಂಚಕಾರ ತರುವ ನದಿ ತಿರುವ ಯೋಜನೆಯನ್ನು ಜನಪ್ರತಿನಿಧಿಗಳು ಒಗ್ಗಟ್ಟಾಗಿ ವಿರೋಧಿಸಬೇಕು. 15 ದಿನದೊಳಗೆ ಸರ್ಕಾರದೊಂದಿಗೆ ಸಭೆ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಆಗ್ರಹಿಸಿದರು.

ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಸಮಿತಿ ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನದಿಗಳ ಉಳಿವಿಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಲ್ಲಬೇಕು

ಉತ್ತರ ಕನ್ನಡ ಜಿಲ್ಲೆಯ ಜೀವ ನದಿಗಳ ಉಳಿವಿಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಲ್ಲಬೇಕು. ಎಲ್ಲ ರಾಜಕೀಯ ಬದಿಗಿಟ್ಟು ಜನರ ಕೂಗಿಗೆ ಧ್ವನಿಯಾಗಬೇಕು. 15 ದಿನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಭೆ ನಡೆಸುವ ಜವಾಬ್ದಾರಿಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಹೊರಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರಕ್ಕೆ ಒಂದು ಲಕ್ಷ ಪತ್ರ

ಇಷ್ಟೊಂದು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಒಂದು ಲಕ್ಷ ಪತ್ರ ಬರೆಯಲಾಗುವುದು. ರಾಜ್ಯ ಸರ್ಕಾರ ಡಿಪಿಆರ್‌ ನಿಲ್ಲಿಸಬೇಕು. ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಹಲವು ಯೋಜನೆಗಳಿಂದ ಕಷ್ಟಕ್ಕೆ ಸಿಲುಕಿದೆ. ಈಗ ಮತ್ತೆ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಮಾಡುವುದರಿಂದ ಜಿಲ್ಲೆಯ ಅರ್ಧಕ್ಕೂ ಅಧಿಕ ತಾಲೂಕುಗಳು ಅತೀವ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮಲೆನಾಡಿನ ರೈತರು, ಕರಾವಳಿಯ ಮೀನುಗಾರರು ಹಾಗೂ ಎರಡೂ ಕಡೆಯ ಜೀವ ಸಂಕುಲಗಳಿಗೆ ಅತಿಯಾದ ಹಾನಿಯಾಗುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.