ಸಾರಾಂಶ
ಅವನಿದ್ದರೆ ಪ್ರತಿದಿನವೂ ಹಬ್ಬವೇ, ಮನೆಮನೆಯೂ ಗೋಕುಲವೇ । ಅವನನ್ನು ಒಲಿಸಿಕೊಳ್ಳಲು ಹಿಡಿ ಪ್ರೀತಿಯ ಅವಲಕ್ಕಿ ಸಾಕು!
ಕೃಷ್ಣನಿಗೆ ಪ್ರಿಯವಾದ ನೈವೇದ್ಯಗಳೆಂದರೆ ಬೆಣ್ಣೆ, ಸಿಹಿ ಅವಲಕ್ಕಿ, ಗೋವಿನ ಹಾಲು, ಕ್ಷೀರಾನ್ನ. ಆದರೆ ಒಂದು ಹಿಡಿ ಅವಲಕ್ಕಿಯೂ ಒಂದು ತುಲಸೀದಳವೂ ಸಾಕು ಅವನಿಗೆ, ಮನಸ್ಸು ಭಕ್ತಿಯಿಂದ ತುಂಬಿದ್ದರೆ. ಶಾಸ್ತ್ರೋಕ್ತವಾಗಿ ಆಚರಿಸಲು ಸಾಧ್ಯವಾಗದಿದ್ದರೆ ಮನಸ್ಸಿನಲ್ಲೇ ಭಗವಂತನ ಧ್ಯಾನ ಮಾಡಿದರೂ ಸಾಕು.
-ಡಾ। ಸುವರ್ಣಿನೀ ಕೊಣಲೆ.
ಒಮ್ಮೆ ಸುಭದ್ರೆಯೂ ದ್ರೌಪದಿಯೂ ಕೃಷ್ಣನೂ ಒಟ್ಟಿಗೇ ಇದ್ದಾಗ ಕೃಷ್ಣನ ಕೈಗೆ ಗಾಯವಾಯಿತಂತೆ. ಸುರಿವ ರಕ್ತವನ್ನು ನಿಲ್ಲಿಸಲು ಬಟ್ಟೆಯ ಪಟ್ಟಿ ಕಟ್ಟಬೇಕು. ಸುಭದ್ರೆ ಬಟ್ಟೆ ಹುಡುಕಲು ಹೊರಟಳಂತೆ. ದ್ರೌಪದಿಯು ತಾನುಟ್ಟ ವಸ್ತ್ರವನ್ನೇ ಹರಿದು ಕೃಷ್ಣನ ಕೈಗೆ ಪಟ್ಟಿ ಕಟ್ಟಿದಳಂತೆ. ಆ ತುಂಡು ವಸ್ತ್ರದ ಋಣವನ್ನು ಕೃಷ್ಣ ವಸ್ತ್ರಾಪಹರಣದ ಸಮಯದಲ್ಲಿ ತೀರಿಸಿದನಂತೆ, ದ್ರೌಪದಿಗೆ ಅಕ್ಷಯಾಂಬರವನ್ನು ಇತ್ತು. ಮೂಲ ಮಹಾಭಾರತದಲ್ಲಿ ಇಲ್ಲದಿದ್ದರೂ ಪ್ರಚಲಿತದಲ್ಲಿರುವ ಬಹು ಪ್ರಸಿದ್ಧ ಕಥೆ ಇದು. ಒಂದು ಹಿಡಿ ಅವಲಕ್ಕಿಯ ಬದಲಿಗೆ ಸುಧಾಮ ಪಡೆದದ್ದು ಅಪಾರ. ಕೃಷ್ಣನೇ ಹಾಗೆ. ಅವನು ಒಮ್ಮೆ ನಮ್ಮ ಕೈಹಿಡಿದರೆ ಬಿಡುವುದಿಲ್ಲ. ಆದರೆ ಕೊಡುವ ಒಂದು ಹಿಡಿ ಅವಲಕ್ಕಿಯಲ್ಲಿ ಪ್ರೀತಿಯಿರಬೇಕು. ಅವನನ್ನು ಸೋಲಿಸುವ ಬಯಕೆ ಹೊತ್ತ ದುರ್ಯೋಧನ, ಶಿಶುಪಾಲ, ಕಂಸರಂತಹ ಮಹಾಬಲಶಾಲಿಗಳು ತಾವೇ ಸೋತುಹೋದರು. ದ್ರೌಪದಿಯಂತೆಯೋ ಅರ್ಜುನನಂತೆಯೋ ಗೋಪಿಕೆಯರಂತೆಯೋ ಯಶೋಧೆಯಂತೆಯೋ ಬೃಂದಾವನದ ಗೋವುಗಳೆಂತೆಯೋ ಅವನನ್ನು ಬಂಧಿಸಬೇಕಿತ್ತು. ಅವನನ್ನೂ ಬದುಕನ್ನೂ ಗೆದ್ದುಬಿಡುತ್ತಿದ್ದರು.
ಅವನು ಜಗದೋದ್ಧಾರ. ಅವನನ್ನು ಮಗನೆಂದುಕೊಂಡ ಯಶೋಧೆ ಅವನನ್ನು ಲಾಲಿಸಿ ಮುದ್ದಿಸಿ ಮುಕ್ತಿ ಪಡೆದಳಂತೆ. ಗೋಪಿಯರು ಅವನನ್ನು ಮೋಹಿಸಿ ಮುಕ್ತಿ ಪಡೆದರಂತೆ. ಅವನೆಡೆಗೆ ಹರಿಸುವ ಅದಮ್ಯ ಅಮಿತ ಪ್ರೀತಿಯೇ ಭಕ್ತಿ. ಅದುವೇ ಮುಕ್ತಿಮಾರ್ಗ.
ಎಲ್ಲೆಡೆ ರೇಡಿಯೋ ತರಂಗಗಳು ಇದ್ದರೂ ಅವುಗಳನ್ನು ಗ್ರಹಿಸಲು ವಿಶೇಷ ಸಾಧನಗಳ ಅಗತ್ಯ ಇರುವಂತೆ ಕೆಲವು ವಿಶೇಷ ದಿನಗಳಂದು ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದು ಹೆಚ್ಚು ಸುಲಭ. ಶ್ರೀಕೃಷ್ಣನ ಅನುಗ್ರಹ ಪಡೆಯಲು ಪ್ರಕೃತಿಯೇ ಅನುಕೂಲ ಮಾಡುವಂತಹ ದಿನವೆಂದರೆ ಶ್ರೀಕೃಷ್ಜನ್ಮಾಷ್ಟಮೀ.
ಆಚರಣೆ
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀತಿಥಿ, ವರ್ಷಾಋತುವಿನ ಕುಂಭದ್ರೋಣ ಮಳೆ, ತುಂಬಿ ಹರಿವ ಯಮುನೆ. ಆ ನಡುರಾತ್ರಿ ದಿವಿಯ ಮಹಾವಿಷ್ಣು ಬುವಿಯಲ್ಲಿ ಅವತರಿಸಿದ. ದೇವರದೇವ ಮನುಷ್ಯನಾಗಿ ಹುಟ್ಟಲು ಆಯ್ದುಕೊಂಡದ್ದು ಸೆರೆಮನೆಯನ್ನು. ಬಂಧನದಲ್ಲಿರುವ ನಮ್ಮನ್ನು ಮುಕ್ತಗೊಳಿಸಲು ಅದುವೇ ಸೂಕ್ತವೆನಿಸಿರಬೇಕು ಅವನಿಗೆ. ಹುಟ್ಟುಸಾವುಗಳಾಚೆಗೆ ನಮ್ಮನೊಯ್ಯಲು ಬಂದವನ ಹುಟ್ಟು ನಮಗೆ ಹಬ್ಬ. ಅದು ಶ್ರೀಕೃಷ್ಣಜನ್ಮಾಷ್ಟಮೀ. ಕೃಷ್ಣನು ರೋಹಿಣೀ ನಕ್ಷತ್ರದಂದು ಜನಿಸಿದ್ದರಿಂದ ರೋಹಿಣೀ ನಕ್ಷತ್ರದಂದು ಶ್ರೀಕೃಷ್ಣಜಯನ್ತಿಯನ್ನು ಆಚರಿಸುವ ಪದ್ಧತಿಯೂ ಇದೆ. ಜನ್ಮಾಷ್ಟಮಿಯು ಸೋಮವಾರ ಅಥವಾ ಬುಧವಾರ ಬಂದರೆ ಅವನ ಸಾಕ್ಷಾತ್ಕಾರಕ್ಕೆ ಹೆಚ್ಚು ಪ್ರಶಸ್ತವೆನ್ನುತ್ತದೆ ಪದ್ಮಪುರಾಣ.
ಭಾರತದಾದ್ಯಂತ ವಿಶಿಷ್ಟವಾಗಿ, ಅತ್ಯಂತ ಪ್ರೀತಿಯಿಂದ ಆಚರಿಸಲ್ಪಡುವ ಈ ಪರ್ವದಂದು ಹಗಲಿಡೀ ಉಪವಾಸವಿದ್ದು ಶ್ರೀಕೃಷ್ಣನ ಉಪಾಸನೆ ಮಾಡಿ, ಭಾಗವತ ಪಾರಾಯಣ, ಕೃಷ್ಣನ ಲೀಲೆಗಳ ಕಥಾಶ್ರವಣ, ಜಾಗರಣೆ ಮಾಡಿ, ರಾತ್ರಿ ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಬಾಲಕೃಷ್ಣನ ಮೂರ್ತಿಗೆ ಸ್ನಾನ-ವಸ್ತ್ರಗಳನ್ನು ಅರ್ಪಿಸಿ, ತೊಟ್ಟಿಲಿನಲ್ಲಿ ಮಲಗಿಸಿ ಅಥವಾ ಮಂಟಪದಲ್ಲಿ ಕೂರಿಸಿ ಶಾಸ್ತ್ರೋಕ್ತ ಪೂಜೆ, ನೈವೇದ್ಯ ಸಮರ್ಪಿಸಿ ಅನಂತರ ಪ್ರಸಾದ ಸ್ವೀಕರಿಸುವುದು, ಐವತ್ತಾರು ಬಗೆಯ ವಿವಿಧ ಭಕ್ಷ್ಯಗಳನ್ನು ಪ್ರೀತಿಯ ಕೃಷ್ಣನಿಗೆ ಅರ್ಪಿಸುವ ಸಂಪ್ರದಾಯವಿದೆ. ಕೃಷ್ಣನಿಗೆ ಪ್ರಿಯವಾದ ನೈವೇದ್ಯಗಳೆಂದರೆ ಬೆಣ್ಣೆ, ಸಿಹಿಅವಲಕ್ಕಿ, ಗೋವಿನ ಹಾಲು, ಕ್ಷೀರಾನ್ನ. ಆದರೆ ಒಂದು ಹಿಡಿ ಅವಲಕ್ಕಿಯೂ ಒಂದು ತುಲಸೀದಳವೂ ಸಾಕು ಅವನಿಗೆ, ಮನಸ್ಸು ಭಕ್ತಿಯಿಂದ ತುಂಬಿದ್ದರೆ. ಶಾಸ್ತ್ರೋಕ್ತವಾಗಿ ಆಚರಿಸಲು ಸಾಧ್ಯವಾಗದಿದ್ದರೆ ಮನಸ್ಸಿನಲ್ಲೇ ಭಗವಂತನ ಧ್ಯಾನ ಮಾಡಿದರೂ ಸಾಕು. ಗೋಕುಲದಲ್ಲಿ ಗೋಪಾಲನಾಗಿದ್ದವನ ದಿನದಂದು ಗೋವುಗಳಿಗೂ ವಿಶೇಷ ಪೂಜೆ ನಡೆಯುತ್ತದೆ.
ಇವೆಲ್ಲದರ ಜೊತೆಗೆ ಅನ್ನ, ಹಣ, ವಸ್ತು ಹೀಗೆ ನಮ್ಮಿಂದ ಸಾಧ್ಯವಾದುದನ್ನು, ಸಾಧ್ಯವಾದಷ್ಟು ದಾನ ಮಾಡಬೇಕು. ದಾನ ಮಾಡುವುದು ನಮ್ಮ ಬದುಕಿನ ಭಾಗವೇ ಆಗಬೇಕು ಎನ್ನುತ್ತದೆ ಸನಾತನಧರ್ಮ. ಸಂಪತ್ತು ಸಂಪಾದಿಸಬೇಕು, ಅದನ್ನು, ಪ್ರತಿಫಲಾಪೇಕ್ಷೆ ಇಲ್ಲದೆ, ಅರ್ಹರಿಗೆ ದಾನ ನೀಡಬೇಕು. ಅದುವೇ ಗೃಹಸ್ಥಧರ್ಮವೂ ಹೌದು. ದಾನ ಕೊಡುವುದರಿಂದ ರಕ್ತದೊತ್ತಡ ಮಿತಿಯಲ್ಲಿರುತ್ತದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಖಿನ್ನತೆ ದೂರವಾಗುತ್ತದೆ ಎನ್ನುವ ಕಾರಣದಿಂದ ಸಮಾಜಕ್ಕೆ ಹೆಚ್ಚು ಹೆಚ್ಚು ಒಳಿತು ನೀಡಿ ಎಂದು ವೈದ್ಯರೂ ವಿಜ್ಞಾನಿಗಳೂ ಇಂದು ಹೇಳುತ್ತಿದ್ದಾರೆ.
ಸಮಾಜಕ್ಕೆ ಒಗ್ಗಟ್ಟಿನ ಪಾಠ
ಶ್ರೀಕೃಷ್ಣನ ಜನ್ಮದಿನದ ಆಚರಣೆ ಬೇರೆ ಬೇರೆ ಪ್ರದೇಶಗಳಲ್ಲಿ ವಿಶಿಷ್ಟವಾಗಿ ನಡೆಯುತ್ತದೆ. ಮಡಿಕೆಯಲ್ಲಿ ಮೊಸರು ತುಂಬಿಸಿ ಎತ್ತರದಲ್ಲಿ ಕಟ್ಟಿ ಮಾನವ ಗೋಪುರ ನಿರ್ಮಿಸಿ ಅಥವಾ ಉದ್ದನೆಯ ಕೋಲಿನಿಂದ ಅದನ್ನು ಒಡೆಯುವ ಮೊಸರು ಕುಡಿಕೆ ಅಥವಾ (ಉತ್ತರ ಭಾರತದಲ್ಲಿ) ದಹಿಹಂಡಿ, ಕೋಲಾಟ ನೃತ್ಯ, ಗಾಳಿಪಟ ಹಾರಿಸುವುದು, ಮೊಸರು ಕಡೆಯುವ ಸ್ಪರ್ಧೆ ಇತ್ಯಾದಿ ಜನರೆಲ್ಲ ಸೇರಿ ಸಂಭ್ರಮಿಸಲು, ಸಮಾಜ ಒಗ್ಗಟ್ಟಾಗಲು ಅವಕಾಶ ಒದಗಿಸುತ್ತದೆ.
ಪರ್ವದಿನಗಳು ಆಧ್ಯಾತ್ಮಿಕವಾಗಿ ನಮ್ಮನ್ನು ಇನ್ನಷ್ಟು ಉನ್ನತಿಗೇರಿಸುವ ಮೆಟ್ಟಿಲುಗಳು. ಭಗವಂತನ ಸ್ವರೂಪವನ್ನು ಮನಸ್ಸಿನಲ್ಲಿ ಭಾವಿಸಿ ನಮ್ಮ ಸರ್ವೇಂದ್ರಿಯಗಳನ್ನೂ ಅವನಲ್ಲಿ ಸ್ಥಿತಗೊಳಿಸಬೇಕು. ಅದುವೇ ನಮ್ಮ ಧ್ಯಾನವಸ್ತುವಾಗಬೇಕು. ಆದರೆ ಹಾಗೆ ಮಾಡಲು ಇಂದು ನಮಗಿರುವ ದೊಡ್ಡ ತಡೆಯೆಂದರೆ ನಮ್ಮ ಅಂಗೈಯಲ್ಲಿ ಮನೆಮಾಡಿ ನಮ್ಮನ್ನೇ ನಿಯಂತ್ರಿಸುವ ನಮ್ಮ ಮೊಬೈಲು ಫೋನುಗಳು. ಹಬ್ಬದೊಂದು ದಿನವಾದರೂ ಕೈಗಳಿಗೆ, ಕಣ್ಣುಗಳಿಗೆ, ಕಿವಿಗಳಿಗೆ ಮೊಬೈಲಿನಿಂದ ಮುಕ್ತಿ ಕೊಟ್ಟು ಮುಕುಂದನಲ್ಲಿ ಮನಸ್ಸನ್ನು ತೊಡಗಿಸುವುದು ಆದ್ಯತೆಯಾಗಲಿ.
ಜಗದ್ಗುರು ಹೇಳಿದ ಪಾಠ
ದೇವಕೀನಂದನ, ರುಕ್ಮಿಣಿಯ ಪತಿ, ರಾಧೆಯ ಪ್ರೇಮಿ, ಸುಧಾಮನ ಮಿತ್ರ, ಅರ್ಜುನನ ಸಖ, ಎಲ್ಲವೂ ಆದ ಕೃಷ್ಣ ಜಗತ್ತಿಗೆ ದಾರಿ ತೋರಲು ಇಳಿದುಬಂದ ಬೆಳಕು. ಗೀತೆ ಅವನು ನಮಗೆ ನೀಡಿದ ಬದುಕಿನ ಮ್ಯಾನುವಲ್.
ಇಂದಿನ ದೊಡ್ಡ ಸಮಸ್ಯೆ ಮಾನಸಿಕ ಒತ್ತಡ. ಯಾರಿಗೂ ನೆಮ್ಮದಿಯಿಲ್ಲ. ಮನಸ್ಸು ಹಾಗೂ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸದ ಹೊರತು ಸ್ಥಿರಬುದ್ಧಿಯೂ ಆರ್ದ್ರಭಾವವೂ ಉಂಟಾಗುವುದಿಲ್ಲ. ಅದಿಲ್ಲದೇ ಶಾಂತಿಯೂ ಸಿಗಲಾರದು. ಯಾವ ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ನೆಲೆಸುವುದಿಲ್ಲವೋ ಅವನಿಗೆ ಬದುಕಿನಲ್ಲಿ ಸುಖವೂ ಇರುವುದಿಲ್ಲ.
ಅಂದಿಗೂ ಇಂದಿಗೂ ಮನುಷ್ಯನ ಶತ್ರುಗಳು ಯಾರು ಗೊತ್ತೇ? ಲೋಭ ಮತ್ತು ಕ್ರೋಧಗಳು. ಇಂದ್ರಿಯ ಸುಖದಲ್ಲಿ ಅತಿಯಾದ ಆಸಕ್ತಿ ಉಂಟಾದಾಗ, ಬೇಕು ಎನ್ನುವ ಅದಮ್ಯ ಬಯಕೆ ಉಂಟಾಗುತ್ತದೆ. ಅದು ಸಿಗದಿದ್ದಾಗ ಸಿಟ್ಟು ಬರುತ್ತದೆ. ಸಿಟ್ಟಿನಿಂದ ಸರಿ ತಪ್ಪುಗಳ ವಿವೇಕವನ್ನು ಇಲ್ಲವಾಗುತ್ತದೆ. ಅದರಿಂದ ವ್ಯಕ್ತಿಯು ನಾಶವಾಗುತ್ತಾನೆ.
ರಜೋಗುಣ ಹೆಚ್ಚಾದಾಗ ಲೋಭ, ಸ್ವಾರ್ಥ, ಅಶಾಂತಿಗಳೆಲ್ಲ ಉಂಟಾಗುತ್ತವೆ. ತಮೋಗುಣ ಹೆಚ್ಚಾದಾಗ ಕರ್ತವ್ಯದಲ್ಲಿ ಅನಾಸಕ್ತಿಯುಂಟಾಗುತ್ತದೆ, ಮನಸ್ಸು ಬುದ್ಧಿಗೆ ಕತ್ತಲುಕವಿಯುತ್ತದೆ. ಇವೆರಡೂ ಬದುಕಿನ ಹಾದಿ ತಪ್ಪಿಸುತ್ತವೆ. ಸತ್ತ್ವಗುಣದಿಂದ ಮನುಷ್ಯ ಜ್ಞಾನವನ್ನೂ ನೆಮ್ಮದಿಯನ್ಮೂ ಪಡೆಯುತ್ತಾನೆ. ಆದ್ದರಿಂದ ವ್ಯಕ್ತಿಯು ತನ್ನ ಆಹಾರ-ವಿಹಾರ- ಆಚಾರ-ವಿಚಾರಗಳಲ್ಲಿ ಸಾತ್ತ್ವಿಕವಾದುದನ್ನೇ ಆಯ್ಕೆ ಮಾಡಿಕೊಳ್ಳಬೇಕು.
ಕೃಷ್ಣಾಷ್ಟಮೀ ಒಂದು ದಿನದ ಹಬ್ಬವಾದರೂ ಕೃಷ್ಣನೆನ್ನುವವ ಪ್ರತಿದಿನದ ಸಂಭ್ರಮ. ಅವನಿಗೆ ಹುಟ್ಟುಸಾವುಗಳಿಲ್ಲ. ಅವನು ನಿತ್ಯ ಸತ್ಯ. ಜನ್ಮಾಷ್ಟಮಿಯ ಶುಭದಿನ ನಮ್ಮೊಳಗೂ ಸತ್ಯ ಬೆಳಗಲಿ.