ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ

| N/A | Published : Aug 07 2025, 08:02 AM IST

Karnataka CM Siddaramaiah (Photo/ANI)

ಸಾರಾಂಶ

ನಗರದ ವಿಕ್ಟೊರಿಯಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿ ರೋಗಿಗಳಿಂದ ವೈದ್ಯರ ಕುರಿತು ಪ್ರತಿಕ್ರಿಯೆ ಪಡೆದರು. ಅಲ್ಲದೆ, ಆಸ್ಪತ್ರೆಯಲ್ಲಿ ನೀಡಲಾಗುವ ಊಟವನ್ನೂ ಪರೀಕ್ಷಿಸಿದರು.

 ಬೆಂಗಳೂರು :  ನಗರದ ವಿಕ್ಟೊರಿಯಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿ ರೋಗಿಗಳಿಂದ ವೈದ್ಯರ ಕುರಿತು ಪ್ರತಿಕ್ರಿಯೆ ಪಡೆದರು. ಅಲ್ಲದೆ, ಆಸ್ಪತ್ರೆಯಲ್ಲಿ ನೀಡಲಾಗುವ ಊಟವನ್ನೂ ಪರೀಕ್ಷಿಸಿದರು.

ಬುಧವಾರ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜೊತೆಗೂಡಿ ಬುಧವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆ , ಅಪಘಾತ, ಆಘಾತ ಮತ್ತು ತುರ್ತು ಆರೈಕೆ ಕೇಂದ್ರ ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ರೋಗಿಗಳ ಕುಶಲ ವಿಚಾರಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೈದ್ಯರು ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು. ಉಚಿತ ಚಿಕಿತ್ಸೆ ಇರುವುದರಿಂದ ಒತ್ತಡವೂ ಹೆಚ್ಚಿರುತ್ತದೆ. ವೈದ್ಯರು ಸಹನೆಯಿಂದ ಕೆಲಸ ಮಾಡಬೇಕು. ಯಾರ ಬಳಿಯೂ ಹಣ ಪಡೆಯಬಾರದು ಎಂದು ವೈದ್ಯರಿಗೆ ಸೂಚಿಸಲಾಗಿದೆ. ಇಲ್ಲಿನ 120 ಹಾಸಿಗೆಗಳ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ಹೆಚ್ಚಿಸುವ ಬಗ್ಗೆ ಬೇಡಿಕೆಯಿದೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಪರಿಗಣಿಸಲಾಗುವುದು ಎಂದರು.

ವಾಣಿ ವಿಲಾಸ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್‌ಗೆ ಸಹ ಭೇಟಿ ನೀಡಿದ್ದು, ವಾಣಿ ವಿಳಾಸದಲ್ಲಿ ಒಂದು ದಿನಕ್ಕೆ 40ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಬೇರೆ ಬೇರೆ ರಾಜ್ಯದ ಜನರು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಜನ ದಟ್ಟಣೆ ಹೆಚ್ಚಿರುವುದರಿಂದ ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚು ಮಾಡಬೇಕಿದೆ. ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿಸಿದೆ. ಡಾಕ್ಟರ್ ಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಊಟ ಚೆನ್ನಾಗಿದೆ ಎಂದು ಹೇಳಿದರು. ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗಕ್ಕೆ ಭೇಟಿ ನೀಡಿದ್ದೇನೆಂ ಅಂಗಾಂಗ ದಾನಕ್ಕೆ ಹೊರಗೆ 30 ರಿಂದ 40 ಲಕ್ಷ ವೆಚ್ಚವಾಗುತ್ತದೆ. ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು.

ಕಣ್ಣೀರು ಹಾಕಿದ ಮಹಿಳೆ:

ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಈ ಬಗ್ಗೆ ಮಾಧ್ಯಮದವರು ಸಿಎಂ ಬಳಿಕ ವಿಚಾರಿಸಿದಾಗ ಹಾಗೇನು ಸಮಸ್ಯೆ ಇಲ್ಲ ಎಂದರು. ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ‘ಮಹಿಳೆ ಖುಷಿಯಿಂದ ಕಣ್ಣೀರು’ ಹಾಕಿದ್ದು ಎಂದು ಹೇಳಿದರು.

ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಂತ ಸಿಎಂ ಕಾರು:

ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವ ವೇಳೆ ಮುಖ್ಯಮಂತ್ರಿಯವರು ಝಿರೋ ಟ್ರಾಫಿಕ್‌ ಬಳಸಲಿಲ್ಲ. ಬದಲಾಗಿ ಎರಡು ಕಡೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರು ನಿಂತಿತ್ತು.

Read more Articles on