ನೂರಾರು ಶವ ಹೂತ ಕೇಸ್‌ ಬಗ್ಗೆ ಎಸ್‌ಐಟಿ ತನಿಖೆ ಶುರು - ಧರ್ಮಸ್ಥಳ ಗ್ರಾಮಕ್ಕೆ ತಂಡ

| N/A | Published : Jul 26 2025, 09:02 AM IST

Dharmasthala
ನೂರಾರು ಶವ ಹೂತ ಕೇಸ್‌ ಬಗ್ಗೆ ಎಸ್‌ಐಟಿ ತನಿಖೆ ಶುರು - ಧರ್ಮಸ್ಥಳ ಗ್ರಾಮಕ್ಕೆ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ ಹಾಗೂ ಆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಅಧಿಕೃತವಾಗಿ ರಂಗಪ್ರವೇಶ ಮಾಡಿದೆ.

  ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ ಹಾಗೂ ಆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಅಧಿಕೃತವಾಗಿ ರಂಗಪ್ರವೇಶ ಮಾಡಿದೆ.

ಪ್ರಕರಣಗಳ ತನಿಖೆಗೆ ಎಸ್ಪಿ ಮಟ್ಟದ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ಎಸ್‌ಐಟಿ ನೇಮಿಸಿದೆ. ಇದರ ಬೆನ್ನಲ್ಲೇ ಧರ್ಮಸ್ಥಳಕ್ಕೆ ತನಿಖಾಧಿಕಾರಿಗಳ ತಂಡ ತೆರಳಿದೆ. ಡಿಐಜಿ ಎಂ.ಎನ್‌.ಅನುಚೇತ್ ಶನಿವಾರ ಹೋಗಲಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ದೂರಿನ ಮೇರೆಗೆ ದಾಖಲಾದ ಪ್ರಕರಣಗಳ ಕುರಿತ ದಾಖಲೆಗಳನ್ನು ಎಸ್‌ಐಟಿ ತಂಡ ಸ್ವೀಕರಿಸಿದೆ. ಅಲ್ಲದೆ, ಪ್ರಕರಣದ ಈವರೆಗಿನ ತನಿಖೆ ಬಗ್ಗೆ ಸ್ಥಳೀಯ ಪೊಲೀಸರಿಂದ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಡಿಐಜಿ ಅನುಚೇತ್ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ, ಆ ಗ್ರಾಮದ ಸುತ್ತಮುತ್ತ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಜು.14 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದರು. ಅಲ್ಲದೆ, ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹಲವರ ಅಂತ್ಯಕ್ರಿಯೆ ನಡೆಸಿದ್ದಾಗಿ ನ್ಯಾಯಾಧೀಶರ ಮುಂದೆ ವ್ಯಕ್ತಿಯೊಬ್ಬರು ನೀಡಿದ್ದ ಹೇಳಿಕೆ ಆಧರಿಸಿ ತನಿಖೆಗೂ ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರು ಒತ್ತಾಯಿಸಿದ್ದರು.

ಈ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ಆದರೆ ಎಸ್‌ಐಟಿಯಿಂದ ಇಬ್ಬರು ಐಪಿಎಸ್ ಅಧಿಕಾರಿಗಳು ಹಾಗೂ ನಾನ್ ಐಪಿಎಸ್ ಅಧಿಕಾರಿಯೊಬ್ಬರು ಹೊರಗುಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಕೊನೆಗೆ ಅಧಿಕಾರಿಗಳನ್ನು ಸಮಾಧಾನಪಡಿಸಿದ ಸರ್ಕಾರ, ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಧರ್ಮಸ್ಥಳಕ್ಕೆ ತೆರಳಿ ಎಸ್‌ಐಟಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ.

ಎಸ್ಪಿ ಜಿತೇಂದ್ರ ಕುಮಾರ್ ಮುಖ್ಯ ಐಒ:

ಪ್ರಕರಣದ ತನಿಖೆಗೆ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಮುಖ್ಯ ತನಿಖಾಧಿಕಾರಿಯಾಗಿ (ಐಒ) ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇಮಿಸಿದ್ದಾರೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಠಾಣೆಯಲ್ಲಿ ವ್ಯಕ್ತಿಯೊಬ್ಬರ ದೂರು ಆಧರಿಸಿ ದಾಖಲಾಗಿರುವ ಪ್ರಕರಣದ ಕುರಿತು ದಯಮಾ ತನಿಖೆ ನಡೆಸಲಿದ್ದಾರೆ.

ಮಂಗಳೂರಿನಲ್ಲೇ ಎಸ್‌ಐಟಿ ಕ್ಯಾಂಪ್‌:

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಎಸ್‌ಐಟಿ ತಾತ್ಕಾಲಿಕ ಕ್ಯಾಂಪ್ ಕಚೇರಿ ಆರಂಭಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಎಸ್‌ಐಟಿಗೆ ಅಗತ್ಯ ಸೌಲಭ್ಯ ಕಲ್ಬಿಸುವಂತೆ ಡಿಜಿಪಿ ಡಾ.ಎಂ.ಸಲೀಂ ಆದೇಶಿಸಿದ್ದಾರೆ. ಅಲ್ಲದೆ, ಎಸ್‌ಐಟಿ ರಚನೆ ಆದೇಶದಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ನೆರವು ಪಡೆಯುವಂತೆ ಸರ್ಕಾರ ಸೂಚಿಸಿತ್ತು.

ಶೀಘ್ರ ದೂರುದಾರನ ವಿಚಾರಣೆ:

ಅಪರಿಚಿತ ಮೃತದೇಹಗಳ ಹೂತಿದ್ದ ಎನ್ನಲಾದ ವ್ಯಕ್ತಿಯನ್ನು ಎಸ್‌ಐಟಿ ತಂಡ ಸದ್ಯದಲ್ಲೇ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ವ್ಯಕ್ತಿಯು ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತವಾಗಿದ್ದಾನೆ.

Read more Articles on