ಸಾರಾಂಶ
2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಪಾತ್ರರಾಗಿದ್ದ 6 ಕನ್ನಡಿಗರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು
ನವದೆಹಲಿ: 2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಪಾತ್ರರಾಗಿದ್ದ 6 ಕನ್ನಡಿಗರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು.
ವಯಲಿನ್ ವಾದಕ ಡಾ. ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಪದ್ಮವಿಭೂಷಣ), ಹಿರಿಯ ಪತ್ರಕರ್ತ, ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಡಾ.ಅರಕಲಗೂಡು ಅನಂತರಾಮಯ್ಯ ಸೂರ್ಯಪ್ರಕಾಶ್ (ಪದ್ಮಭೂಷಣ), ಚಿತ್ರಕಲಾವಿದ ಕಾರ್ಕಳದ ವಾಸುದೇವ್ ತಾರಾನಾಥ್ ಕಾಮತ್ (ಪದ್ಮಶ್ರೀ), ಮಾರ್ಷಲ್ ಆರ್ಟ್ಸ್ ತಜ್ಞ ಡಾ.ಹಾಸನ ರಘು (ಪದ್ಮಶ್ರೀ) , ಕ್ಯಾನ್ಸರ್ ತಜ್ಞೆ ಕಲಬುರಗಿಯ ವಿಜಯಲಕ್ಷ್ಮೀ ದೇಶಮಾನೆ (ಪದ್ಮಶ್ರೀ).
ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಪದ್ಮಶ್ರೀ), ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2025ನೇ ಸಾಲಿನಲ್ಲಿ 10 ಕನ್ನಡಿಗರಿಗೆ ಪದ್ಮ ಪ್ರಶಸ್ತಿ ಪ್ರಕಟವಾಗಿತ್ತು. ಆ ಪೈಕಿ ಆರು ಮಂದಿಗೆ ಸೋಮವಾರ ಪ್ರದಾನವಾಗಿದ್ದು, ಉಳಿದವರಿಗೆ ಮುಂದಿನ ದಿನಗಳಲ್ಲಿ ನೀಡಲಾಗುವುದು.
ಶಿಷ್ಟಾಚಾರ ಮುರಿದು ಭೀಮವ್ವಗೆ ಮುರ್ಮು ಪ್ರಶಸ್ತಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೊಪ್ಪಳದ ಭೀಮವ್ವ ಅವರಿಗೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಶಿಷ್ಟಾಚಾರನ್ನು ಮುರಿದರು. 96 ವರ್ಷದ ಕಲಾವಿದೆಗೆ ಪ್ರಶಸ್ತಿ ನೀಡಲು ಮುರ್ಮು ಅವರು ತಾವು ವೇದಿಕೆಯಿಂದ ಇಳಿದು ಭೀಮವ್ವ ಅವರಿದ್ದ ಕಡೆಗೆ ಆಗಮಿಸಿ ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು.