ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ದರ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಬೆಂಗಳೂರಿನ ‘ನಮ್ಮ ಮೆಟ್ರೋ’ ಮಾದರಿಯಲ್ಲಿ ಸ್ಮಾರ್ಟ್‌ಕಾರ್ಡ್‌ ಮೂಲಕ ಬಸ್‌ ಪ್ರಯಾಣ ದರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ದರ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಬೆಂಗಳೂರಿನ ‘ನಮ್ಮ ಮೆಟ್ರೋ’ ಮಾದರಿಯಲ್ಲಿ ಸ್ಮಾರ್ಟ್‌ಕಾರ್ಡ್‌ ಮೂಲಕ ಬಸ್‌ ಪ್ರಯಾಣ ದರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

‘ಶಕ್ತಿ’ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ನೀಡಲು ಈಗಾಗಲೇ ಯೋಜಿಸಲಾಗಿದೆ. ಆ ಮೂಲಕ ಫಲಾನುಭವಿಗಳ ನಿಖರ ಮಾಹಿತಿ ಪಡೆಯಲು ಹಾಗೂ ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಮುಂದಾಗಿದೆ. ಇದೀಗ ಶಕ್ತಿ ಫಲಾನುಭವಿಗಳೊಂದಿಗೆ ಇತರ ಪ್ರಯಾಣಿಕರಿಗೂ ಸ್ಮಾರ್ಟ್‌ಕಾರ್ಡ್‌ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ. ನಾಲ್ಕೂ ನಿಗಮಗಳ ಬಸ್‌ಗಳಲ್ಲಿನ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಿಷನ್‌ (ಇಟಿಎಂ)ಗಳಲ್ಲಿ ಬಳಕೆ ಮಾಡುವಂತಹ ಸ್ಮಾರ್ಟ್‌ಕಾರ್ಡ್‌ಗಳನ್ನು ಪ್ರಯಾಣಿಕರಿಗೆ ವಿತರಿಸಲು ತೀರ್ಮಾನಿಸಲಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಒಟ್ಟು 26 ಸಾವಿರ ಬಸ್‌ಗಳಿದ್ದು, ಪ್ರತಿದಿನ ಅಂದಾಜು 1.20 ಕೋಟಿ ಪ್ರಯಾಣಿಕರು ಬಸ್‌ ಸೇವೆ ಬಳಸುತ್ತಿದ್ದಾರೆ. ಅದರಲ್ಲಿ 70ರಿಂದ 75 ಲಕ್ಷ ಪ್ರಯಾಣಿಕರು ಶಕ್ತಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಆದರೆ, ಶಕ್ತಿ ಯೋಜನೆಯಲ್ಲಿ ಲೋಪಗಳಿವೆ ಎಂಬ ದೂರುಗಳು ಬರುತ್ತಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸ್ಮಾರ್ಟ್‌ಕಾರ್ಡ್‌ ನೀಡಲು ಅನುಮತಿಸಿದೆ. ಅದರ ಜತೆಗೆ ಉಳಿದ ಪ್ರಯಾಣಿಕರಿಗೂ ಸ್ಮಾರ್ಟ್‌ಕಾರ್ಡ್‌ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ಶಕ್ತಿ ಯೋಜನೆ ಫಲಾನುಭವಿಗಳ ಜತೆಗೆ ಒಟ್ಟು 1 ಕೋಟಿ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಕೆಎಸ್ಸಾರ್ಟಿಸಿಯನ್ನು ನೋಡಲ್‌ ಸಂಸ್ಥೆಯಾಗಿ ನೇಮಿಸಲಾಗಿದೆ.

ಚಿಪ್‌ ಅಳಪಡಿಸಿರುವ ಕಾರ್ಡ್‌:

ಶಕ್ತಿ ಯೋಜನೆ ಹೊರತುಪಡಿಸಿ ಉಳಿದ ಪ್ರಯಾಣಿಕರು ಪಡೆಯುವ ಸ್ಮಾರ್ಟ್‌ ಕಾರ್ಡ್‌ಗಳನ್ನು ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದ್ದು, ಅದರ ಮೂಲಕ ಬಸ್‌ ಪ್ರಯಾಣ ದರ ಪಾವತಿಸಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಚಿಪ್‌ಗಳನ್ನು ಅಳವಡಿಸಲಾಗುತ್ತದೆ. ಅದನ್ನು ಇಟಿಎಂ ಮೂಲಕ ರೀಡ್‌ ಮಾಡಿ ಪ್ರಯಾಣ ದರ ಕಡಿತಗೊಳಿಸಬಹುದಾಗಿದೆ. ಕೆಎಸ್ಸಾರ್ಟಿಸಿ ನೀಡುವ ಸ್ಮಾರ್ಟ್‌ಕಾರ್ಡ್‌ ಉಳಿದ ಮೂರು ನಿಗಮಗಳಾದ ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲೂ ಬಳಕೆ ಮಾಡಬಹುದಾಗಿದೆ. ಭವಿಷ್ಯದಲ್ಲಿ ಈ ಸ್ಮಾರ್ಟ್‌ಕಾರ್ಡ್‌ ಮೆಟ್ರೋ ರೈಲು ಮತ್ತು ಉಪನಗರ ರೈಲು ಪ್ರಯಾಣ ದರ ಪಾವತಿಗೂ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ.

ಹಾಗೆಯೇ, ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್‌ ಮಾಡಿಕೊಳ್ಳಲು ಪ್ರತ್ಯೇಕ ಮೊಬೈಲ್‌ ಅಪ್ಲಿಕೇಷನ್‌ ಕೂಡ ಅಭಿವೃದ್ಧಿಪಡಿಸಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ ಪೂರೈಕೆ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿ ಖಾಸಗಿ ಸಂಸ್ಥೆ ನೇಮಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಈ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಡಿಜಿಟಲ್‌ ಟಿಕೆಟ್‌ ಖರೀದಿ ಸೇವೆ ನೀಡಲಾಗುತ್ತದೆ.

- ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಡ್‌ ನೀಡುವ ಪ್ರಸ್ತಾವ ಮೊದಲಿನಿಂದಲೂ ಇದೆ

- ಆ ಫಲಾನುಭವಿಗಳ ಜತೆಗೆ ಪುರುಷ ಪ್ರಯಾಣಿಕರಿಗೂ ಕಾರ್ಡ್‌ ನೀಡಲು ಸರ್ಕಾರ ನಿರ್ಧಾರ

- ಸ್ತ್ರೀಯರಿಗೆ ಉಚಿತ ಪ್ರಯಾಣ ಇರುತ್ತದೆ. ಇತರರು ಸ್ಮಾರ್ಟ್‌ ಕಾರ್ಡಿಗೆ ರೀಚಾರ್ಜ್‌ ಮಾಡಿಸಬೇಕು

- ಪ್ರಯಾಣ ವೇಳೆ ಇಟಿಎಂಗೆ ಕಾರ್ಡ್‌ ತೋರಿಸಬೇಕು. ಒಂದೇ ಕಾರ್ಡ್‌ 4 ನಿಗಮಗಳಲ್ಲೂ ಬಳಸಬಹುದು