ಸಾರಾಂಶ
ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣ ಎನ್ನಲಾದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಅನಾರೋಬಿಕ್ ಪರೀಕ್ಷೆ ಪೈಕಿ ಸ್ಟೆರಿಲಿಟಿ ಪರೀಕ್ಷೆಯ ವರದಿ ಬಂದಿದ್ದು, ಔಷಧಿಯ ಗುಣಮಟ್ಟದಲ್ಲಿ ಸಮಸ್ಯೆಯಿಲ್ಲ ಎಂದು ವರದಿ ಬಂದಿರುವುದಾಗಿ ತಿಳಿದುಬಂದಿದೆ.
, ಬೆಂಗಳೂರು : ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣ ಎನ್ನಲಾದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಅನಾರೋಬಿಕ್ ಪರೀಕ್ಷೆ ಪೈಕಿ ಸ್ಟೆರಿಲಿಟಿ ಪರೀಕ್ಷೆಯ ವರದಿ ಬಂದಿದ್ದು, ಔಷಧಿಯ ಗುಣಮಟ್ಟದಲ್ಲಿ ಸಮಸ್ಯೆಯಿಲ್ಲ ಎಂದು ವರದಿ ಬಂದಿರುವುದಾಗಿ ತಿಳಿದುಬಂದಿದೆ.
ಆದರೆ, ಅನಾರೋಬಿಕ್‌ನ ಮತ್ತೊಂದು ಪರೀಕ್ಷೆಯಾದ ಎಂಡೊಟಾಕ್ಸಿನ್ ಪರೀಕ್ಷೆ ವರದಿ ಇನ್ನೂ ಬರಬೇಕಿದೆ.
ಬಳ್ಳಾರಿ ಬಾಣಂತಿಯರಿಗೆ ನೀಡಿದ್ದ ಔಷಧದ ಪೈಕಿ ಮೂರು ಬ್ಯಾಚ್‌ಗಳನ್ನು ರಾಜ್ಯ ಸರ್ಕಾರದ ಡ್ರಗ್ ಕಂಟ್ರೋಲರ್ ಅವರಿಂದ ಪರೀಕ್ಷೆ ನಡೆಸಲಾಗಿದೆ. ಡ್ರಗ್ ಕಂಟ್ರೋಲರ್ ಅವರು ಅನಾರೋಬಿಕ್ ಪರೀಕ್ಷೆಯಡಿ ಸ್ಟೆರಿಲಿಟಿ ಪರೀಕ್ಷೆ ಹಾಗೂ ಎಂಡೊಟಾಕ್ಸಿನ್ ಪರೀಕ್ಷೆ ನಡೆಸಿದ್ದು, ಈ ಪೈಕಿ ಒಂದು ಪರೀಕ್ಷೆಯ ವರದಿ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಮೂರೂ ಬ್ಯಾಚ್‌ಗಳ ಔಷಧಿಯ ಗುಣಮಟ್ಟ ಉತ್ತಮವಾಗಿದೆ ಎಂದು ಫಲಿತಾಂಶ ಬಂದಿದೆ. ಹೀಗಾಗಿ ಬಾಣಂತಿಯರ ಸಾವಿಗೆ ಈ ಔಷಧ ಕಾರಣವಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಸದನದಲ್ಲಿ ಈ ವರದಿ ಮಂಡಿಸುವ ಸಾಧ್ಯತೆಯಿದ್ದು, ಖಚಿತ ಮಾಹಿತಿ ಲಭ್ಯವಾಗಲಿದೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ಔಷಧಿ ಬಗ್ಗೆ ಯಾವುದೇ ಅಂತಿಮ ವರದಿ ಬಂದಿಲ್ಲ. ವರದಿ ಬಂದ ಬಳಿಕವಷ್ಟೇ ಮಾಹಿತಿ ತಿಳಿಯಲಿದೆ ಎಂದರು.