ಸಾರಾಂಶ
ಗ್ರಾಮೀಣ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಅರಿವು ಕೇಂದ್ರಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಅನುವಾಗುವಂತೆ ಬ್ರೈಲ್ ಸಾಹಿತ್ಯ, ಸಹಾಯಕ ತಂತ್ರಜ್ಞಾನ ಒಳಗೊಂಡ ‘ದರ್ಶಿನಿ’ ವಿಶೇಷ ಸಾಧನಗಳ ವ್ಯವಸ್ಥೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಚಾಲನೆ ನೀಡಿದರು.
ಬೆಂಗಳೂರು : ಗ್ರಾಮೀಣ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಅರಿವು ಕೇಂದ್ರಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಅನುವಾಗುವಂತೆ ಬ್ರೈಲ್ ಸಾಹಿತ್ಯ, ಸಹಾಯಕ ತಂತ್ರಜ್ಞಾನ ಒಳಗೊಂಡ ‘ದರ್ಶಿನಿ’ ವಿಶೇಷ ಸಾಧನಗಳ ವ್ಯವಸ್ಥೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಚಾಲನೆ ನೀಡಿದರು.
ಗುರುವಾರ ವಿಕಾಸಸೌಧದಲ್ಲಿ ಗ್ರಾಮಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗಳೊಂದಿಗೆ ವರ್ಚಯಲ್ ಸಭೆ ನಡೆಸಿ ದರ್ಶಿನಿ ಯೋಜನೆಗೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿಶೇಷ ಚೇತನ ಅಭ್ಯರ್ಥಿಗಳಿಗೆ ಮಾಹಿತಿ ನೀಡುವಲ್ಲಿ ಹಾಗೂ ಉದ್ಯೋಗಾವಕಾಶ ಗಳಿಸಿಕೊಳ್ಳುವಲ್ಲಿ ಮಾರ್ಗದರ್ಶಿಯಾಗಿ ಯೋಜನೆ ಕೆಲಸ ಮಾಡಲಿದೆ.
ಭಾರತ ದೇಶಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಿದ್ದು ವಿಶೇಷ ಚೇತನ ವ್ಯಕ್ತಿಗಳು ಅರಿವು ಕೇಂದ್ರಗಳನ್ನು ಸುಲಭವಾಗಿ ಬಳಸಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜತೆಗೆ ದೃಷ್ಟಿ ಹೀನತೆ ಹೊಂದಿರುವ ವ್ಯಕ್ತಿಗಳಿಗೆ ಬ್ರೈಲ್ ಸಾಹಿತ್ಯ ಮತ್ತು ಇತರ ಸಹಾಯಕ ತಂತ್ರಜ್ಞಾನಗಳು ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಅಂಧರ ಸಂಸ್ಥೆಯು ಇಂಟರ್‌ಪಾಯಿಂಟ್ ಬ್ರೈಲ್ ಸ್ಲೇಟು ಮತ್ತು ಸ್ಟೈಲಸ್, ಕಾನ್ಕ್ಲೇವ್ ಹೆಡ್ ಪ್ಲಾಸ್ಟಿಕ್ ಸ್ಟೈಲಸ್, ಟ್ಯಾಕ್ಟೈಲ್ ಚೆಸ್ ಬೋರ್ಡ್ (ಇನ್‌ಕ್ಲೂಸಿವ್ ಡಿಸೈನ್), ಆಡಿಯೋ ಬಾಲ್, ಪಝಲ್, ಸ್ನೇಕ್ -ಲಾಡರ್ ಡೈಸ್ ಜೊತೆ ಪ್ಲೇಟ್ ಮತ್ತು ಆಬಾಕಸ್ ಉಪಕರಣಗಳನ್ನು ಅರಿವು ಕೇಂದ್ರಗಳಿಗೆ ಒದಗಿಸಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದರು.
ಈಗಾಗಲೇ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಒಟ್ಟು 5888 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 5767 ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಕೇಂದ್ರಗಳಲ್ಲಿ ಓದುವ ಬೆಳಕು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಸುಮಾರು 50 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ವಿಷಯ ಪರಿಣಿತರಾದ ಡಾ। ಇಂದುಮತಿ ರಾವ್ ಮತ್ತು ಪ್ರಶಾಂತ್, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಜರಿದ್ದರು.