ಬೆಂಗಳೂರು : ರಾಜ್ಯ ಸರ್ಕಾರವು ಮಹಾವೀರ ಜಯಂತಿ ಪ್ರಯುಕ್ತದ ಸಾರ್ವತ್ರಿಕ ರಜಾ ದಿನವನ್ನು ಮಾರ್ಪಡಿಸಿರುವ ಹಿನ್ನೆಲೆಯಲ್ಲಿ ಮಾ.30ಕ್ಕೆ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಪರೀಕ್ಷೆಯನ್ನು ಮಾ.31ಕ್ಕೆ ನಿಗದಿಪಡಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಮಾ.31ಕ್ಕೆ ಈ ಬಾರಿಯ ಮಹಾವೀರ ಜಯಂತಿಯ ಸಾರ್ವತ್ರಿಕ ರಜಾ ದಿನ

ಸರ್ಕಾರ ಈ ಮೊದಲು ಮಾ.31ಕ್ಕೆ ಈ ಬಾರಿಯ ಮಹಾವೀರ ಜಯಂತಿಯ ಸಾರ್ವತ್ರಿಕ ರಜಾ ದಿನವನ್ನು ಘೋಷಿಸಿತ್ತು. ಆದರೆ, ಜೈನ ಸಮುದಾಯದ ಮುಖಂಡರು ತಮ್ಮ ಸಂಪ್ರದಾಯದಂತೆ ಮಾ.30ರಂದೇ ರಜೆ ಘೋಷಿಸಬೇಕೆಂದು ಸರ್ಕಾರಕ್ಕೆ ಕೋರಿದ್ದರು. ಅದರಂತೆ ಸರ್ಕಾರ ಮಾ.31ರ ಬದಲು 30ಕ್ಕೆ ರಜೆಯನ್ನು ಮಾರ್ಪಡಿಸಿ ಆದೇಶಿಸಿದೆ. 

ಸಾರ್ವತ್ರಿಕ ರಜೆ ದಿನದಂದು ಪರೀಕ್ಷೆ ನಡೆಸಬಾರದೆಂಬ ನಿಯಮ

ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ದಿನದಂದು ಪರೀಕ್ಷೆ ನಡೆಸಬಾರದೆಂಬ ನಿಯಮಾನುಸಾರ ಮಂಡಳಿಯು ಮಾ.30ಕ್ಕೆ ನಿಗದಿಯಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ವೇಳಾಪಟ್ಟಿ ಪರಿಷ್ಕರಿಸಿದೆ. ಇನ್ನುಳಿದ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ. ಏ.2ರಂದು ಸಮಾಜ ವಿಜ್ಞಾನ ಕೊನೆಯ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.