ಸಾರಾಂಶ
ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು ಹೆಚ್ಚಿನ ಗಮನ ಹರಿಸಬೇಕು.
ಬೆಂಗಳೂರು : ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು ಹೆಚ್ಚಿನ ಗಮನ ಹರಿಸಬೇಕು. ಇದಕ್ಕಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವ ಕೇಂದ್ರ ಸ್ಥಾಪಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಆರೋಗ್ಯಸೌಧದಲ್ಲಿ ಸೋಮವಾರ ಜೀವಸಾರ್ಥಕತೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟವರಿಂದ ಅಂಗಾಂಗಗಳನ್ನು ಪಡೆಯುವ ಪ್ರಯತ್ನಗಳು ಸರ್ಕಾರಿ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಬೇಕು. ಈ ಬಗ್ಗೆ ಜಿಲ್ಲಾಸ್ಪತ್ರೆಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಅಂಗಾಂಗ ದಾನ ಮತ್ತು ಕಸಿ ಪ್ರಯತ್ನಗಳನ್ನು ಹೆಚ್ಚಿಸುವ ಗುರಿ ಸಾಧಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಜೀವಸಾರ್ಥಕತೆ ಸೊಸೈಟಿಯ ನೋಂದಣಿ ಪ್ರಕ್ರಿಯೆ, ಕಾರ್ಯಾಚರಣೆಯಲ್ಲಿ ವೇಗ ತರಬೇಕು. ಜತೆಗೆ ಸ್ಟೀರಿಂಗ್ ಸಮಿತಿಯನ್ನು ರಚಿಸಿ ಅಂಗಾಂಗ ವಿತರಣೆ ಸಮರ್ಪಕವಾಗಿ ಒದಗಿಸಲು ಮೂತ್ರಪಿಂಡ ಹಂಚಿಕೆ ನೀತಿಯನ್ನು ಸಹ ಪರಿಷ್ಕರಣೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.