ಹೊರ ವರ್ತುಲ ರೈಲ್ವೆಗಾಗಿ ಉಪನಗರ ರೈಲಿಗೆ ಕೊಕ್ಕೆ? -ಉಪನಗರ ರೈಲು 2ನೇ ಹಂತ 142 ಕಿಮೀಗೆ ಸೀಮಿತ

| Published : Sep 26 2024, 05:18 AM IST

Express Train

ಸಾರಾಂಶ

ಉದ್ದೇಶಿತ ಹೊರವರ್ತುಲ ರೈಲ್ವೆ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಹಾಗೂ ನೈಋತ್ಯ ರೈಲ್ವೆಯ ಆಕ್ಷೇಪಣೆ ಕಾರಣ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 2ನೇ ಹಂತ ವಿಸ್ತರಣೆ 452 ಕಿಮೀ ವ್ಯಾಪ್ತಿಯ ಬದಲಾಗಿ 142 ಕಿ.ಮೀ. ವಿಸ್ತರಣೆಗೆ ಸೀಮಿತವಾಗುವ ಸಾಧ್ಯತೆಯಿದೆ.

ಬೆಂಗಳೂರು : ಉದ್ದೇಶಿತ ಹೊರವರ್ತುಲ ರೈಲ್ವೆ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಹಾಗೂ ನೈಋತ್ಯ ರೈಲ್ವೆಯ ಆಕ್ಷೇಪಣೆ ಕಾರಣ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 2ನೇ ಹಂತ ವಿಸ್ತರಣೆ 452 ಕಿಮೀ ವ್ಯಾಪ್ತಿಯ ಬದಲಾಗಿ 142 ಕಿ.ಮೀ. ವಿಸ್ತರಣೆಗೆ ಸೀಮಿತವಾಗುವ ಸಾಧ್ಯತೆಯಿದೆ.

ಇತ್ತೀಚೆಗೆ ನೈಋತ್ಯ ರೈಲ್ವೆ ಮತ್ತು ಕೆ-ರೈಡ್ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಶೀಘ್ರವೇ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ಈ ಸಂಬಂಧ ರೈಲ್ವೆ ಮಂಡಳಿಗೆ ಪುನರ್‌ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಕೆ-ರೈಡ್‌ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಆರಂಭದಲ್ಲಿ ಕೆ-ರೈಡ್‌ ಉಪನಗರ ರೈಲ್ವೆ ಯೋಜನೆಯ 2ನೇ ಹಂತದಲ್ಲಿ 452 ಕಿ.ಮೀ. ಮಾರ್ಗ ವಿಸ್ತರಿಸಲು ರೈಲ್ವೆ ಮಂಡಳಿಗೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ರೈಲ್ವೆ ಮಂಡಳಿಗೆ ಪತ್ರ ಬರೆದು ಬಿಎಸ್‌ಆರ್‌ಪಿ ಹಂತ-2 ಯೋಜನೆ ಅನಗತ್ಯ ಎಂದು ಆಕ್ಷೇಪಿಸಿತ್ತು. ಹೀಗಾಗಿ ಪ್ರಸ್ತಾವನೆ ತಿರಸ್ಕೃತಗೊಂಡಿತ್ತು. ಪುನರ್‌ ಪ್ರಸ್ತಾವನೆ ಸಲ್ಲಿಸಿದರೂ ರೈಲ್ವೆ ಮಂಡಳಿ ಈವರೆಗೆ ಯಾವುದೇ ಉತ್ತರ ನೀಡಿಲ್ಲ.

ಮೊದಲ ಹಂತದ ನಾಲ್ಕು ಕಾರಿಡಾರ್‌ಗಳನ್ನು ವಿಸ್ತರಿಸುವ ಯೋಜನೆ ಇದಾಗಿತ್ತು. ಅಂದರೆ, ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರದಿಂದ ಕೋಲಾರ, ಚಿಕ್ಕಬಾಣಾವರದಿಂದ ತುಮಕೂರು, ಚಿಕ್ಕಬಾಣಾವರದಿಂದ ಮಾಗಡಿ, ಕೆಂಗೇರಿಯಿಂದ ಮೈಸೂರು, ವೈಟ್‌ಫೀಲ್ಡ್ ನಿಂದ ಬಂಗಾರಪೇಟೆ, ಹೀಲಲಿಗೆಯಿಂದ ಹೊಸೂರು, ರಾಜಾನುಕುಂಟೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಬೆಂಗಳೂರು ವರ್ತುಲ ರೈಲು ಮಾರ್ಗಕ್ಕಾಗಿ ನಡೆಯುತ್ತಿರುವ ಸಮೀಕ್ಷೆ, ಕ್ವಾರ್ಡ್‌ಪೊಲಿಂಗ್‌ (ನಾಲ್ಕು ಹಳಿ), ಜೋಡಿ ಮಾರ್ಗದ ಯೋಜನೆ ನಡೆಯುತ್ತಿರುವ ಕಾರಣ 452 ಕಿ.ಮೀ. ವ್ಯಾಪ್ತಿಯಷ್ಟು ಉಪನಗರ ರೈಲು ವಿಸ್ತರಿಸಲು ನೈಋತ್ಯ ರೈಲ್ವೆ ಒಪ್ಪಿರಲಿಲ್ಲ.

 ಹೊರ ವರ್ತುಲ ರೈಲ್ವೆಗೆ ಲಿಂಕ್‌

ಇದೀಗ ಬಿಎಸ್‌ಆರ್‌ಪಿಯನ್ನು 142 ಕಿ.ಮೀ. ವಿಸ್ತರಿಸುವ ಯೋಜನೆ ರೂಪಿಸಲಾಗುತ್ತಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ, ಚಿಕ್ಕಬಾಣಾವರದಿಂದ ದಾಬಸ್‌ಪೇಟೆ, ಚಿಕ್ಕಬಾಣಾವರದಿಂದ ಮಾಗಡಿ ರಸ್ತೆ, ಹೀಲಲಿಗೆಯಿಂದ ಆನೇಕಲ್ ರಸ್ತೆ, ರಾಜಾನುಕುಂಟೆಯಿಂದ ವಡೇರಹಳ್ಳಿ, ಕೆಂಗೇರಿಯಿಂದ ಹೆಜ್ಜಾಲದವರೆಗೆ ವಿಸ್ತರಿಸಲು ಹಿಂದೆಯೂ ಪ್ರಸ್ತಾಪವಿತ್ತು. ಹೊರ ವರ್ತುಲ ರೈಲು ಯೋಜನೆಯ ಮಾರ್ಗವನ್ನು ಇವು ಸಂಧಿಸಲಿವೆ. ಈ ಸಂಬಂಧ ರೈಲ್ವೆ ಮಂಡಳಿಗೆ ಪುನರ್‌ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಕೇಳುವ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.