ಸಾರಾಂಶ
ದೇಶದ ವಾಹನ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಟಾಟಾ ತನ್ನ ‘ಆಲ್ಟ್ರೋಜ್’ ಮಾದರಿಯ ಕಾರನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಗುರುವಾರ ಬಿಡುಗಡೆ ಮಾಡಿದೆ.
ಮೈತ್ರಿ. ಎಸ್
ಮುಂಬೈ : ದೇಶದ ವಾಹನ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಟಾಟಾ ತನ್ನ ‘ಆಲ್ಟ್ರೋಜ್’ ಮಾದರಿಯ ಕಾರನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಗುರುವಾರ ಬಿಡುಗಡೆ ಮಾಡಿದೆ.
ಮುಂಬೈನ ಪೊವೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಆಲ್ಟ್ರೋಸ್ ಕಾರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಟಾಟಾ ಮೋಟಾರ್ಸ್ ಪಾಸೆಂಜರ್ ವೆಹಿಕಲ್ಸ್ ಲಿ. ಮತ್ತು ಟಾಟಾ ಪಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.ನ ವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು ಕಳೆದ ೫ ವರ್ಷದಲ್ಲಿ ಆಲ್ಟ್ರೋಜ್‌ನ ಬೆಳವಣಿಗೆಯ ಬಗ್ಗೆ ವಿವರಿಸಿದರು. ಅಂತೆಯೇ, ʼ2025 ಆವೃತ್ತಿಯು ಅತ್ಯಾಧುನಿಕ ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆ ನಿರ್ದೇಶಿತ ದೃಷ್ಟಿಕೋನ ಹೊಂದಿದೆ. ಇದರ ಪ್ರತಿ ಅಂಶವೂ, ಚಾಲನೆಯ ಅನುಭವವನ್ನು ವರ್ಧಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ಬಣ್ಣಿಸಿದರು.
ಮಧ್ಯಮ ವರ್ಗದ ಜನರೂ ಕಾರನ್ನು ಕೊಳ್ಳುವಂತೆ ಮಾಡಲು ಕೈಗೆಟುಕುವ ದರದಲ್ಲಿ ನ್ಯಾನೋ ಉತ್ಪಾದಿಸಿದ್ದ ಕಂಪನಿಯು 2020ರ ಜ.22ರಂದು ಮೊದಲ ಆಲ್ಟ್ರೋಜ್ ಕಾರನ್ನು ಬಿಡುಗಡೆ ಮಾಡಿದ್ದು, ಅದಾದ ೫ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಧುನಿಕ ಅಗತ್ಯತೆಗಳಿಗೆ ತಕ್ಕಂತೆ ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಹೊಸ ಆಲ್ಟ್ರೋಜ್‌ನ ಮೂಲ ಬೆಲೆ 6.89 ಲಕ್ಷ ರು. ಆಗಿದ್ದು, ಇದು ಪ್ರಿಸ್ಟೀನ್ ವೈಟ್, ಪ್ಯೂರ್ ಗ್ರೇ, ರಾಯಲ್ ಬ್ಲೂ, ಎಂಬರ್ ಗ್ಲೋ ಮತ್ತು ಡ್ಯೂನ್ ಗ್ಲೋ ಬಣ್ಣಗಳಲ್ಲಿ ಲಭ್ಯವಿದೆ. ಜೂ.2ರಿಂದ ಇದರ ಬುಕಿಂಗ್ ಆರಂಭವಾಗಲಿದೆ.
ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಚಾಲಿತವಾಗಿರುವ ಈ ಆಲ್ಟ್ರೋಜ್‌ನಲ್ಲಿ 5 ಸ್ಪೀಡ್ ಮ್ಯಾನುವಲ್, ಹೊಸ 5-ಸ್ಪೀಡ್ ಎಎಂಟಿ ಮತ್ತು ರಿಫೈನ್ಡ್ 6-ಸ್ಪೀಡ್ ಡಿಸಿಎ ವಿಧದ ಗೇರ್ ಇರಲಿದೆ.
ಸುರಕ್ಷತೆಗೆ ಆದ್ಯತೆ:
ಕಾರಿನಲ್ಲಿ ಆರಾಮದಾಯಕ ಪ್ರಯಾಣದ ಜತೆ ಸುರಕ್ಷೆತೆಯೂ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಆಲ್ಟ್ರೋಸ್‌ನಲ್ಲಿ, ಅಪಘಾತದ ಸಂದರ್ಭದಲ್ಲಿ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಇವು ತ್ವರಿತವಾಗಿ ತೆರೆದುಕೊಳ್ಳುವುದನ್ನು ಹಾಗೂ ಒಳಗಿರುವವರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಅಂತೆಯೇ, ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ವರ್ಗದಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ.
ಈ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಚಾಲನೆ, ರಿವರ್ಸಿಂಗ್ ವೇಳೆ ಅಪಘಾತಗಳಾಗುವ ಸಾಧ್ಯತೆಗಳು ಕ್ಷೀಣಿಸುತ್ತದೆ.
ತಂತ್ರಜ್ಞಾನದ ಬಳಕೆ:
ಹೊಸ ಆಲ್ಟ್ರೋಜ್ ತಯಾರಿಕೆಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ನಿರ್ವಹಿಸಿದೆ. ಭಾರತ, ಬ್ರಿಟನ್ ಮತ್ತು ಇಟಲಿಯಲ್ಲಿರುವ ಟಾಟಾ ಡಿಸೈನ್ ಸ್ಟುಡಿಯೋ ಸಿಬ್ಬಂದಿ ವರ್ಚುವಲ್ ರಿಯಾಲಿಟಿಯ ಮೂಲಕ ಸಂಪರ್ಕದಲ್ಲಿದ್ದು ಇದರ ವಿನ್ಯಾಸ ಮಾಡಿದ್ದಾರೆ ಎಂಬುದು ವಿಶೇಷ.
ಕಾರ್‌ನ ವಿಶೇಷತೆಗಳೇನು?:
ಮೊದಲಿದ್ದ ಆಲ್ಟ್ರೋಜ್ ಕಾರಿನಲ್ಲಿದ್ದ ವ್ಯವಸ್ಥೆಗಳ ಜತೆಗೆ ಇನ್ನಷ್ಟು ಆರಾಮದಾಯಕ ಮತ್ತು ಸುರಕ್ಷಿತ ಬದಲಾವಣೆಗಳನ್ನು ಹೊಸ ಮಾದರಿಯ ಕಾರ್‌ನಲ್ಲಿ ಮಾಡಲಾಗಿದೆ. ಹೊಸ ಆಲ್ಟ್ರೋಜ್‌ನಲ್ಲಿ 2 ಎಲ್‌ಇಡಿ ಸ್ಕ್ರೀನ್‌ಗಳಿದ್ದು, ಒಂದನ್ನು ಚಾಲಕನ ಅಗತ್ಯತೆಗೆ ತಕ್ಕಂತೆ ಸ್ಟೇರಿಂಗ್‌ನ ಬಳಿ ಅಳವಡಿಸಲಾಗಿದೆ. ಇನ್ನೊಂದು 10.25 ಇಂಚ್‌ನ ಟಚ್‌ಸ್ಕ್ರೀನ್ ಇದ್ದು, ಇದನ್ನು ಮನರಂಜನೆಗೆ ಬಳಸಬಹುದು. ವೈಯರ್‌ಲೆಸ್ ಮೊಬೈಲ್ ಚಾರ್ಜಿಂಗ್ ಸೌಲಭ್ಯವೂ ಲಭ್ಯವಿದೆ. ಈ ಕಾರಿನಲ್ಲಿ 90 ಡಿಗ್ರಿ ತೆರೆಯುವ ಬಾಗಿಲುಗಳು ಮತ್ತು ಧ್ವನಿ ಕಮಾಂಡ್ ಮೂಲಕ ತೆರೆದುಕೊಳ್ಳುವ ಸನ್‌ರೂಫ್, ಫ್ಲಷ್‌ಡೋರ್ ಹ್ಯಾಂಡಲ್, ಎಲ್‌ಇಡಿ ಟೇಲ್ ಲ್ಯಾಂಪ್, ಐಶಾರಾಮಿ ಸೀಟ್, ವಿಶೇಷ ವಿನ್ಯಾಸದ ಮಿಶ್ರಲೋಹ (ಅಲಾಯ್)ದ ಚಕ್ರಗಳಂತಹ 50ಕ್ಕೂ ಹೆಚ್ಚು ಆಕರ್ಷಕ ವ್ಯವಸ್ಥೆಗಳು ಇವೆ.