ಗುವಾಹಟಿಯಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ

| Published : Feb 12 2025, 12:32 AM IST

ಸಾರಾಂಶ

ಅಸ್ಸಾಮ್‌ನ ಗುವಾಹಟಿಯಲ್ಲಿ ಟಾಟಾ ಸಂಸ್ಥೆಯು ರೀವೈರ್ ಎಂಬ ವಾಹನ ಸ್ಕ್ರಾಪಿಂಗ್ ಘಟಕವನ್ನು ಉದ್ಘಾಟಿಸಿದೆ.

ಕನ್ನಡಪ್ರಭವಾರ್ತೆ

ಟಾಟಾ ಕಂಪನಿ ಗುವಾಹಟಿಯಲ್ಲಿ ತನ್ನ ಹೊಸ ವಾಹನ ಸ್ಕ್ರ್ಯಾಪಿಂಗ್ ಘಟಕ ‘ರೀ.ವೈ.ರ್. - ರೀಸೈಕಲ್ ವಿತ್ ರೆಸ್ಪೆಕ್ಟ್’ ಅನ್ನು ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ವಾರ್ಷಿಕವಾಗಿ 15,000 ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಜೈಪುರ, ಭುವನೇಶ್ವರ್, ಸೂರತ್, ಚಂಡೀಗಢ, ದೆಹಲಿ ಮತ್ತು ಪುಣೆಯಲ್ಲಿ ಈಗಾಗಲೇ ರೀವೈರ್ ಘಟಕಗಳಿದ್ದು, ಈ ಹೊಸ ಘಟಕವು ದೇಶದಲ್ಲಿ ಇರುವ ಏಳನೇ ಸ್ಕ್ರಾಪಿಂಗ್ ಘಟಕವಾಗಿದೆ.

ರೀ.ವೈ.ರ್. ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಅದರ ಎಲ್ಲಾ ಕಾರ್ಯಾಚರಣೆಗಳು ಕಾಗದರಹಿತವಾಗಿರುತ್ತವೆ. ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಸೆಲ್ -ಟೈಪ್ ಮತ್ತು ಲೈನ್- ಟೈಪ್ ಡಿಸ್ಮಾಂಟ್ಲಿಂಗ್‌ ವಿಭಾಗವನ್ನು ಹೊಂದಿರುವ ಈ ಘಟಕದಲ್ಲಿ ಟೈರ್‌ಗಳು, ಬ್ಯಾಟರಿಗಳು, ಇಂಧನ, ತೈಲಗಳು, ದ್ರವಗಳು ಮತ್ತು ಅನಿಲಗಳು ಸೇರಿದಂತೆ ವಿವಿಧ ಘಟಕಗಳನ್ನು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡಲಾಗುತ್ತದೆ. ಪ್ರತೀ ವಾಹನಕ್ಕೂ ನಿಖರವಾದ ದಾಖಲಾತಿ ಮತ್ತು ಸ್ಕ್ರಾಪಿಂಗ್ ಪ್ರಕ್ರಿಯೆ ನಡೆಸಲಾಗುತ್ತದೆ.

ವಿಶೇಷವಾಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪಿಂಗ್ ಮಾಡುವಂತೆ ಈ ಘಟಕವನ್ನು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರದ ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರ ಎಲ್ಲಾ ಘಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ರೀ.ವೈ.ರ್. ಪರಿಕಲ್ಪನೆ ಮತ್ತು ಘಟಕವು ಆಟೋಮೋಟಿವ್ ಉದ್ಯಮದಲ್ಲಿ ಸುಸ್ಥಿರ ಪದ್ಧತಿಗಳನ್ನು ಪಾಲಿಸುವ ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಘಟಕವನ್ನು ಅಸ್ಸಾಮ್‌ ಸರ್ಕಾರದ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿ, ಸಾರಿಗೆ, ಸಹಕಾರ, ಸ್ಥಳೀಯ ಮತ್ತು ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಸಚಿವರಾದ ಜೋಗೆನ್ ಮೋಹನ್ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ನೀರಾವರಿ ಸಚಿವರಾದ ಅಶೋಕ್ ಸಿಂಘಾಲ್ ಉದ್ಘಾಟಿಸಿದರು.

ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ. ಗಿರೀಶ್ ವಾಘ್ ಮತ್ತು ಆಕ್ಸಮ್ ಆಟೋಮೊಬೈಲ್ಸ್ ನ ನಿರ್ದೇಶಕ ಡಾ. ಸಂಜೀವನಾರಾಯಣ್, ಅಸ್ಸಾಂ ಸರ್ಕಾರದ ಹಿರಿಯ ಅಧಿಕಾರಿಗಳು, ಟಾಟಾ ಮೋಟಾರ್ಸ್ ಮತ್ತು ಆಕ್ಸಮ್ ಆಟೋಮೊಬೈಲ್ ನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.