ಎರಡು ತಿಂಗಳ ಶೆಡ್ ಬಾಡಿಗೆ 10 ಸಾವಿರ ರು. ಕೊಡದ ಕಾರಣಕ್ಕೆ ತಮಗೆ ಬೈದಿದ್ದಕ್ಕಾಗಿ ಬಿಹಾರ ಮೂಲದ ಇಬ್ಬರು ಸ್ವಿಗ್ಗಿ ಫುಡ್‌ಡೆಲವರಿ ಹುಡುಗರು ತಮ್ಮ ಮಾಲೀಕನಿಗೆ ಗುಂಡಿಟ್ಟು ಕೊಂದು ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ

ಬೆಂಗಳೂರು : ಎರಡು ತಿಂಗಳ ಶೆಡ್ ಬಾಡಿಗೆ 10 ಸಾವಿರ ರು. ಕೊಡದ ಕಾರಣಕ್ಕೆ ತಮಗೆ ಬೈದಿದ್ದಕ್ಕಾಗಿ ಬಿಹಾರ ಮೂಲದ ಇಬ್ಬರು ಸ್ವಿಗ್ಗಿ ಫುಡ್‌ಡೆಲವರಿ ಹುಡುಗರು ತಮ್ಮ ಮಾಲೀಕನಿಗೆ ಗುಂಡಿಟ್ಟು ಕೊಂದು ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ. ಪಟ್ಟಂದೂರು ಅಗ್ರಹಾರದ ನಿವಾಸಿ ವಕೀಲ ಮಂಜುನಾಥ್ (42) ಮೃತ ಮಾಲೀಕ. ಆರೋಪಿಗಳಾದ ಪವನ್ ದುಬೆ ಹಾಗೂ ಅಮಿತ್ ದುಬೆ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬಾಡಿಗೆ ಕೊಡುವ ನೆಪದಲ್ಲಿ ಭಾನುವಾರ ರಾತ್ರಿ ಮಂಜುನಾಥ್ ಅವರ ಮನೆಗೆ ತೆರಳಿ ಹಣೆಗೆ ಗುಂಡಿಟ್ಟು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೂವರೆ ವರ್ಷದಿಂದ ವಾಸ

ಬಿಹಾರದಿಂದ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಪವನ್ ಹಾಗೂ ಅಮಿತ್, ಬಳಿಕ ನಗರದಲ್ಲಿ ಸ್ವಿಗ್ಗಿ ಆ್ಯಪ್‌ನಲ್ಲಿ ಫುಡ್ ಡೆಲವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ 1.5 ವರ್ಷದಿಂದ ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಅವರಿಗೆ ಸೇರಿದ ಶೆಡ್‌ನಲ್ಲಿ (ಸೀಟಿನ ಪುಟ್ಟ ಮನೆ) ಆ ಹುಡುಗರು ನೆಲೆಸಿದ್ದರು. ಆ ಶೆಡ್‌ಗೆ ಮಾಸಿಕ 5 ಸಾವಿರ ರು. ಬಾಡಿಗೆ ನಿಗದಿಯಾಗಿತ್ತು.

ಆದರೆ 2 ತಿಂಗಳಿಂದ ಬಾಡಿಗೆ ಕೊಡದ ಕಾರಣಕ್ಕೆ ಪವನ್ ಹಾಗೂ ಅಮಿತ್‌ಗೆ ಮಂಜುನಾಥ್ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಕೆರಳಿದ ಆರೋಪಿಗಳು, ಮಂಜುನಾಥ್ ಹತ್ಯೆಗೆ ಮುಂದಾಗಿದ್ದಾರೆ. ಅಂತೆಯೇ ಅವರಿಗೆ ರಾತ್ರಿ 10.30ರಲ್ಲಿ ಕರೆ ಮಾಡಿ ಬಾಡಿಗೆಯನ್ನು ಫೋನ್ ಪೇ ಮಾಡುತ್ತೇವೆ ಎಂದಿದ್ದಾರೆ. ಆದರೆ ರಾತ್ರಿ 11.30ರಲ್ಲಿ ಮತ್ತೆ ಮಂಜುನಾಥ್ ಅವರಿಗೆ ಕರೆ ಮಾಡಿ ತಾಂತ್ರಿಕ ಸಮಸ್ಯೆಯಿಂದ ಫೋನ್‌ ಪೇ ನಲ್ಲಿ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ನಾವೇ ಮನೆಗೆ ಬಂದು ಕೊಡುತ್ತೇವೆ ಎಂದಿದ್ದಾರೆ. ಈ ಮಾತಿಗೆ ಮಂಜುನಾಥ್ ಸಮ್ಮತಿಸಿದ್ದಾರೆ.

ಅದರಂತೆ ಕೆಲ ನಿಮಿಷದಲ್ಲಿ ಮಂಜುನಾಥ್ ಮನೆಗೆ ಪ್ರತ್ಯೇಕ ಬೈಕ್‌ಗಳಲ್ಲಿ ಇಬ್ಬರು ತೆರಳಿದ್ದಾರೆ. 5 ಅಂತಸ್ತಿನ ಕಟ್ಟಡದಲ್ಲಿ 2ನೇ ಮಹಡಿಯಲ್ಲಿ ಮಂಜುನಾಥ್ ನೆಲೆಸಿದ್ದರು. ಒಬ್ಬಾತ 5 ಸಾವಿರ ರು.ಹಣವನ್ನು ಕೊಟ್ಟಿದ್ದಾನೆ. ಆತನಿಂದ ಹಣ ಪಡೆದು ಹಣ ಎಣಿಸುವ ಹೊತ್ತಿಗೆ ಸರಿಯಾಗಿ ಮಂಜುನಾಥ್ ಅವರ ಹಣೆಗೆ ಮತ್ತೊಬ್ಬ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಈ ಗುಂಡಿನ ಸದ್ದು ಕೇಳಿ ಮಂಜುನಾಥ್ ಕುಟುಂಬದವರು ಹೊರ ಬರುವ ವೇಳೆಗೆ ಆರೋಪಿಗಳು ಕಾಲ್ಕತ್ತಿದ್ದಾರೆ.

ಮನೆಯ ರೂಮ್‌ನಲ್ಲಿದ್ದ ಮೃತನ ಪತ್ನಿ ಹಾಗೂ ಮಕ್ಕಳು, ತಕ್ಷಣವೇ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

50 ರಿಂದ 60 ಶೆಡ್‌ಗಳ ಒಡೆಯ

ಮೃತ ಮಂಜುನಾಥ್ ಅವರು ಭೂ ಮಾಲೀಕರಾಗಿದ್ದು, ಪಟ್ಟಂದೂರು ಸುತ್ತಮುತ್ತ ಕೋಟ್ಯಾಂತರ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅವರು ಹೊಂದಿದ್ದರು. ಪಟ್ಟಂದೂರಿನಲ್ಲೇ ಅವರ ಕುಟುಂಬಕ್ಕೆ ಸೇರಿದ 50 ರಿಂದ 60 ಕಾರ್ಮಿಕರ ಶೆಡ್‌ಗಳಿದ್ದವು. ಅಲ್ಲದೆ ಮೃತರು ವಾಣಿಜ್ಯ ಕಟ್ಟಡಗಳನ್ನು ಸಹ ಹೊಂದಿದ್ದು, ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಲಕ್ಷಾಂತರ ರು. ವರಮಾನವಿತ್ತು. ಪ್ರವೃತ್ತಿಯಾಗಿ ಅವರು ವಕೀಲಿಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಹಿಂದೆ ಪರಿಚಿತರ ಕೈವಾಡ?

ವಕೀಲ ಮಂಜುನಾಥ್ ಹತ್ಯೆಯಲ್ಲಿ ಮೃತನ ಪರಿಚಿತರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ವಿಶ್ಲೇಷಿಸಿದಾಗ ಬಾಡಿಗೆ ವಿಚಾರವಾಗಿ ನಡೆದ ಗಲಾಟೆಗೆ ಹಠತ್ತಾಗಿ ಸಿಟ್ಟಿಗೆದ್ದು ಹತ್ಯೆ ನಡೆದಿರುವ ಬಗ್ಗೆ ಶಂಕೆ ಮೂಡಿದೆ. ಇದೊಂದು ಪೂರ್ವಯೋಜಿತ ಕೊಲೆಯಾಗಿರುವ ಬಗ್ಗೆ ಗುಮಾನಿ ಇದೆ. ಬಿಹಾರ ರಾಜ್ಯದ ಹುಡುಗರನ್ನು ಸುಪಾರಿ ಹಂತಕರಾಗಿ ಬಳಸಿಕೊಂಡು ಮಂಜುನಾಥ್ ಅವರನ್ನು ಪರಿಚಿತರು ಹತ್ಯೆ ಮಾಡಿಸಿರುವುದನ್ನು ತಳ್ಳಿ ಹಾಕುವಂತಿಲ್ಲ. ಹಣ ಅಥವಾ ಭೂ ವಿವಾದ ಆಯಾಮದಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರತ್ಯೇಕವಾಗಿ ಪರಾರಿ:

ಈ ಹತ್ಯೆ ಬಳಿಕ ಪ್ರತ್ಯೇಕ ಬೈಕ್‌ಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಇಬ್ಬರ ಮೊಬೈಲ್‌ಗಳು ಸ್ವಿಚ್ಛ್ ಆಗಿವೆ. ನಾವು ಜೊತೆಯಲ್ಲೇ ಓಡಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳಬಹುದು ಎಂದು ಅಂದಾಜಿಸಿ ಬೇರೆ ಬೇರೆ ದಿಕ್ಕಿಗೆ ಇಬ್ಬರು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಬಾಡಿಗೆ ವಿಚಾರವಾಗಿ ವಕೀಲ ಮಂಜುನಾಥ್ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಇತರೆ ಕಾರಣಗಳಿರುವ ಬಗ್ಗೆ ಸಹ ಶಂಕೆ ಇದ್ದು, ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ.