ಸರ್ಕಾರ 11 ಲಕ್ಷ ಕುಟುಂಬದ ಅನ್ನ ಕಿತ್ಕೊತ್ತಿದೆ’ : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

| Published : Nov 18 2024, 11:48 AM IST

HD Kumaraswamy

ಸಾರಾಂಶ

11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ- ಎಚ್‌.ಡಿ.ಕುಮಾರಸ್ವಾಮಿ

ಕೋಲಾರ : 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಸರ್ಕಾರದ ಮೇಲೆ ಹೊರೆ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಎಲ್ಲೂ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಕಡಿತ ಮಾಡಿಲ್ಲ. ಇವರು ಮಾಡಿರುವ ತಪ್ಪಿನಿಂದ ಈ 11 ಲಕ್ಷ ಕಾರ್ಡುದಾರರು ಇನ್ನು ಮುಂದೆ ಹಣ ಕೊಟ್ಟು ಅಕ್ಕಿ ಖರೀದಿ ಮಾಡಬೇಕು, ಅಲ್ಲವೇ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿ ರಾಜ್ಯವು ಸಾಲದ ದವಡೆಗೆ ಸಿಲುಕಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರಂತರವಾಗಿ ತೆರಿಗೆ, ಶುಲ್ಕ ಹೆಚ್ಚಿಸುತ್ತಾ ಬಂದಿದೆ. ಗ್ಯಾರಂಟಿಗಳಿಗೆ ವರ್ಷಕ್ಕೆ 52000 ರಿಂದ 60000 ಕೋಟಿ ಆಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಂಗ್ರಹ ಆಗುತ್ತಿರುವ ಜನರ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ?. ಈಗ ರಾಜ್ಯ ಸರ್ಕಾರ 1.5 ಲಕ್ಷ ಕೋಟಿ ರು.ಸಾಲ ಮಾಡುತ್ತಿದೆ. ಆ ಸಾಲ ತೀರಿಸುವವರು ಯಾರು?, ಬಡ್ಡಿ ಕಟ್ಟುವವರು ಯಾರು?, ಮತ್ತೆ ಮತ್ತೆ ಸರ್ಕಾರ ಜನರ ಮೇಲೆಯೇ ಹೊರೆ ಹೊರಿಸುತ್ತದೆ ಎಂದು ಅವರು ಕಿಡಿಕಾರಿದರು.

ಕರ್ನಾಟಕದ ಗ್ಯಾರಂಟಿಗಳ ಅನುಷ್ಠಾನ ಅರಿಯಲು ಪ್ರಧಾನಿ ಮೋದಿ ರಾಜ್ಯಕ್ಕೆ ಬರುವಂತೆ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ. ಪ್ರಧಾನಿಗಳನ್ನು ಕರೆದು ಇವರು ಏನು ಮಾಡುತ್ತಾರೆ?, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ. ಮೊದಲು ರಾಜ್ಯದ ಸ್ಥಿತಿಯನ್ನು ಸಿಎಂ ಸರಿ ಮಾಡಲಿ ಎಂದರು.