ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ‘ದಲಿತರ ಸಮಾವೇಶ’ಕ್ಕೆ ಬ್ರೇಕ್‌ ಬಿದ್ದ ಬೆನ್ನಲ್ಲೇ ಆ ರ್‍ಯಾಲಿಯ ಹೆಸರು ‘ಶೋಷಿತರ ಸಮಾವೇಶ’ ಎಂದು ಬದಲಾಗಿದ್ದು, ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಈ ಸಮಾವೇಶ ನಡೆಯುವ ಸಾಧ್ಯತೆ ಇದೆ.

ನವದೆಹಲಿ : ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ‘ದಲಿತರ ಸಮಾವೇಶ’ಕ್ಕೆ ಬ್ರೇಕ್‌ ಬಿದ್ದ ಬೆನ್ನಲ್ಲೇ ಆ ರ್‍ಯಾಲಿಯ ಹೆಸರು ‘ಶೋಷಿತರ ಸಮಾವೇಶ’ ಎಂದು ಬದಲಾಗಿದ್ದು, ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಈ ಸಮಾವೇಶ ನಡೆಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಶೋಷಿತರ ಸಮಾವೇಶ ಹಮ್ಮಿಕೊಳ್ಳುವ ಕುರಿತಂತೆ ಕಾಂಗ್ರೆಸ್‌ ಕೇಂದ್ರ ನಾಯಕರಿಗೆ ಕೋರಲಾಗಿದ್ದು, ಕೇಂದ್ರ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ದೆಹಲಿಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ ಆಗಮಿಸುವಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಮೈಸೂರು ಅಥವಾ ಬೆಂಗಳೂರು ಭಾಗದಲ್ಲಿ ಒಂದು ಸಮಾವೇಶ ಮಾಡಲು ಉದ್ದೇಶಿಸಲಾಗಿದೆ. ಎಸ್‌ಟಿ ಸಮುದಾಯ ಎಂದು ನಾನು ಸಂಕುಚಿತವಾಗಿ ನೋಡಲು ಹೋಗುವುದಿಲ್ಲ. ಕಾಂಗ್ರೆಸ್‌ಗೆ ಯಾವ ಸಮಾವೇಶದಿಂದ ಶಕ್ತಿ ಬರುತ್ತದೆಯೋ ಅದನ್ನು ಮಾಡಿ ಎಂದು ಹೇಳಿದ್ದೇನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದು, ಇದರ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕಿದೆ. ಇದರಿಂದ ಜನರಿಗೆ ಶಕ್ತಿ ಬಂದಿದೆಯಾ ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕಿದೆ. ನಾವು ಯಾವುದೇ ಸಮಾವೇಶ ಮಾಡಿದರೂ ಅದು ಪಕ್ಷದ ವೇದಿಕೆಯಿಂದಲೇ ನಡೆಯುತ್ತದೆ ಎಂದು ರಾಜಣ್ಣ ಹೇಳಿದರು.

ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ವೇಣುಗೋಪಾಲ, ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಪಕ್ಷದ ಘಟನಾವಳಿಗಳು, ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ, ಪಕ್ಷದ ಹಿತದೃಷ್ಟಿಯಿಂದ ಪಕ್ಷ ಸಂಘಟನೆ ಕುರಿತು ತೆಗೆದುಕೊಳ್ಳಬೇಕಾಗಿರುವ ತೀರ್ಮಾನಗಳ ಬಗ್ಗೆ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಉಸ್ತುವಾರಿಯಿಂದ ಮುಕ್ತಿಗೆ ಕೋರಿಕೆ:

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಿ ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಡಿ ಎಂದು ಕೋರಿದ್ದೇನೆ. ನನಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ಕೇಳಲ್ಲ ಎಂದು ರಾಜಣ್ಣ ತಿಳಿದರು.

ವಿಧಾನಪರಿಷತ್ ನಾಮಕರಣ:

ವಿಧಾನಪರಿಷತ್ ಅಂದ್ರೆ ನಿರಾಶ್ರಿತರ ಕೂಟ ಆಗಬಾರದು. ವಿದ್ವತ್ ಇರುವ ಜನರನ್ನು ಪರಿಷತ್‌ಗೆ ನೇಮಕ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಈ ಪರಂಪರೆಗೆ ತಿಲಾಂಜಲಿ ನೀಡುತ್ತಿರುವುದು ಕಂಡ ಬರುತ್ತಿದೆ. ಆದರೆ ಈ ಬಾರಿ ತಳ ಸಮುದಾಯಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದೇನೆ. ಇದರಿಂದ ಪಕ್ಷ ಬೆಳವಣಿಗೆಗೆ ಸಹಾಯ ಆಗುತ್ತದೆ ಎಂದು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರ ಟಿಕೆಟ್ ಕೊಟ್ಟಿರುವ ಸಮುದಾಯಕ್ಕೆ ಬಿಟ್ಟು ಇತರೆ ಸಮುದಾಯಗಳ ಜನರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕು. ಇದನ್ನು ನನ್ನ ಕ್ಷೇತ್ರದಲ್ಲಿ ಪ್ರಯೋಗ ಮಾಡಿದ್ದೇನೆ. ಇದರಿಂದ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ ಎಂದು ರಾಜಣ್ಣ ಹೇಳಿದರು.

ಉಸ್ತುವಾರಿಯಿಂದ ಬಿಡುಗಡೆ ದಲಿತ ಸಿಎಂ

ದಲಿತ ಸಿಎಂ ಕೂಗು ಏನೇ ಇದ್ದರೂ ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಮುಖ್ಯಮಂತ್ರಿ ಸ್ಥಾನ ಕೇಳುವ ಹಕ್ಕಿದೆ. ಕೇಳುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ಗಮನದಲ್ಲಿದೆ. ಎಐಸಿಸಿ ಹೇಳಿದಂತೆ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡ್ತಾರಾ ಎನ್ನುವ ಕುತೂಹಲ ಇದೆ. ಎಐಸಿಸಿ ಅವರು ಹೇಳಿದ್ರೆ ನಾನು ಕೆಪಿಸಿಸಿ ಅಧ್ಯಕ್ಷನಾಗಲು ಸಿದ್ಧ. ಆಗ ಮಂತ್ರಿ ಹುದ್ದೆ ಬಿಡುತ್ತೇನೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರ ಅಭಿಪ್ರಾಯ ಕಡೆಗಣಿಸಿ ಹೈಕಮಾಂಡ್ ಯಾರನ್ನೂ ಮುಖ್ಯಂತ್ರಿ ಮಾಡುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು. ಕೆ.ಸಿ. ವೇಣುಗೋಪಾಲ ಅವರು ಅವತ್ತು ಹೇಳುವಾಗ ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷ ಅಂತಾ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಬಾರದು. ಶೇ. 100 ರಷ್ಟು ಪ್ರಯಾಣ ದರ ಹೆಚ್ಚು ಮಾಡುವುದು ಸರಿ ಅಲ್ಲ ಎಂದರು.