ಸಾರಾಂಶ
ಹೋಟೆಲ್ ಉದ್ಯಮದಲ್ಲಿ ನಷ್ಟವಾಗಿ, ಸಾಲ ತೀರಿಸಲು ತಂದೆ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಿ, ತಂದೆಯನ್ನೇ ಕೊಂದು, ಅಪಘಾತದ ಕಥೆ ಕಟ್ಟಿ ಓಡಾಡಿಕೊಂಡಿದ್ದ ಮಗನನ್ನು ಕಲಬುರಗಿಯ ಮಾಡಬೂಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ : ಹೋಟೆಲ್ ಉದ್ಯಮದಲ್ಲಿ ನಷ್ಟವಾಗಿ, ಸಾಲ ತೀರಿಸಲು ತಂದೆ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಿ, ತಂದೆಯನ್ನೇ ಕೊಂದು, ಅಪಘಾತದ ಕಥೆ ಕಟ್ಟಿ ಓಡಾಡಿಕೊಂಡಿದ್ದ ಮಗನನ್ನು ಕಲಬುರಗಿಯ ಮಾಡಬೂಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಆದರ್ಶ ಕಾಲೋನಿ ನಿವಾಸಿ ಸತೀಶ್ ಬಂಧಿತ ಆರೋಪಿ. ಘಟನೆ ನಡೆದ ಸುಮಾರು 6 ತಿಂಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಈತನೊಟ್ಟಿಗೆ ಸೇರಿ ಕೊಲೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ ಆತನ ಗೆಳೆಯರಾದ ಅರುಣ್, ಯುವರಾಜ ಹಾಗೂ ರಾಕೇಶ್‌ನನ್ನು ಬಂಧಿಸಲಾಗಿದೆ.
ಜುಲೈ 8ರಂದು ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಕ್ರಾಸ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಸತೀಶ್ ತಂದೆ ಕಾಳಿಂಗರಾವ್ (65) ಮೃತಪಟ್ಟಿದ್ದರು. ಸತೀಶ್ ಗಾಯಗೊಂಡಿದ್ದ. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ಆರಂಭಿಸಿದ ಪೊಲೀಸರಿಗೆ ಅಪಘಾತದ ಸ್ಥಳ ಹಾಗೂ ಸತೀಶ್ ವಿವರಿಸಿದಂತೆ ಅಪಘಾತ ನಡೆದ ರೀತಿ ಸಂಶಯ ಹುಟ್ಟಿಸಿತ್ತು. ಬೈಕ್ ಮೇಲೆ ತಂದೆಯನ್ನು ಕರೆದುಕೊಂಡು ಎಲ್ಲಿಗೆ ಹೊರಟಿದ್ದೆ? ಎನ್ನುವ ಪೊಲೀಸರ ಸರಳ ಪ್ರಶ್ನೆಗೆ ಉತ್ತರಿಸಲಾಗದೆ ತಡಬಡಿಸಿ, ಬಳಿಕ, ಸತ್ಯಸಂಗತಿ ಬಾಯ್ಬಿಟ್ಟ. ತಂದೆ ಹೆಸರಲ್ಲಿ ₹5 ಲಕ್ಷ ವಿಮೆ ಮಾಡಿಸಿದ್ದು, ₹25 ಲಕ್ಷ ಕ್ಲೇಮ್‌ಗೆ ಯೋಜಿಸಿದ್ದ. ಆ ಹಣದಲ್ಲಿ ಸಾಲ ತೀರಿಸುವ ದುರುದ್ದೇಶದಿಂದ ಬೈಕ್ ಬೀಳಿಸಿ, ತಂದೆಯನ್ನು ಕೊಲೆ ಮಾಡಿದ್ದ. ಸ್ನೇಹಿತರ ಕಡೆಯಿಂದ ತಲೆಗೆ ಕಲ್ಲಿನಿಂದ ಹೊಡೆಸಿಕೊಂಡು ತನಗೂ ಗಾಯವಾಗಿದೆ ಎಂದು ತೋರಿಸಿದ್ದ. ಸ್ನೇಹಿತರಿಗೆ ತಲಾ ₹50 ಸಾವಿರ ನೀಡಿದ್ದ.