ಸಾರಾಂಶ
ಮಹದಾಯಿ ಬಗ್ಗೆಯೋ ಇನ್ನೊಂದರ ಬಗ್ಗೆಯೋ ಚಳವಳಿ ಆರಂಭಿಸುವಾಗ ಎಲ್ಲ ಪಕ್ಷಗಳನ್ನು, ಜನರನ್ನು ಒಳಗೊಂಡು ಮಾಡಿದ್ದರೆ ಅದು ಸರಿ. ರಾಜಕೀಯಪ್ರೇರಿತ ಚಳವಳಿಗಳಲ್ಲಿ ಅವರ ಪಕ್ಷದವರು ಇರುತ್ತಾರೆಯೇ ಹೊರತು ಬೇರೆಯವರು ಯಾರೂ ಇರಲ್ಲ. ಹೀಗಿರುವಾಗ ಯಾವುದೋ ಕಾರಣಕ್ಕೆ ಸಿನಿಮಾದವರಿಗೆ ವಾರ್ನಿಂಗ್ ಕೊಡುವುದು ಸರಿಯಲ್ಲ.
ಬೆಂಗಳೂರು : ‘ಮಹದಾಯಿ ಬಗ್ಗೆಯೋ ಇನ್ನೊಂದರ ಬಗ್ಗೆಯೋ ಚಳವಳಿ ಆರಂಭಿಸುವಾಗ ಎಲ್ಲ ಪಕ್ಷಗಳನ್ನು, ಜನರನ್ನು ಒಳಗೊಂಡು ಮಾಡಿದ್ದರೆ ಅದು ಸರಿ. ರಾಜಕೀಯಪ್ರೇರಿತ ಚಳವಳಿಗಳಲ್ಲಿ ಅವರ ಪಕ್ಷದವರು ಇರುತ್ತಾರೆಯೇ ಹೊರತು ಬೇರೆಯವರು ಯಾರೂ ಇರಲ್ಲ. ಹೀಗಿರುವಾಗ ಯಾವುದೋ ಕಾರಣಕ್ಕೆ ಸಿನಿಮಾದವರಿಗೆ ವಾರ್ನಿಂಗ್ ಕೊಡುವುದು ಸರಿಯಲ್ಲ.’
ಸಿನಿಮಾದವರ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಖ್ಯಾತ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಪ್ರತಿಕ್ರಿಯಿಸಿದ್ದು ಹೀಗೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರೀತಿಯ ಚಳವಳಿಯನ್ನು ಅವರು ನಡೆಸಿದ್ದಾರೆ ಎಂಬುದು ಮುಖ್ಯ. ಮಹದಾಯಿ ಬಗ್ಗೆಯೋ ಇನ್ನೊಂದರ ಬಗ್ಗೆಯೋ ಚಳವಳಿ ಆರಂಭಿಸುವಾಗ ಅವರು ಎಲ್ಲ ಪಕ್ಷಗಳನ್ನು ಜನರನ್ನು ಒಳಗೊಂಡು ಮಾಡಿದ್ದಲ್ಲಿ ಅದು ನಿಜವಾಗಿಯೂ ಎಲ್ಲರ ಜೊತೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಆಗುತ್ತಿತ್ತು. ಅವರು ಜೋಡಿಸುವ ಕೆಲಸ ಮಾಡದೇ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ವಿಭಜಿಸುವ ಕೆಲಸವನ್ನ ಒಪ್ಪಿಕೊಳ್ಳುವವರು ಬಹಳ ಜನ ಕಾಣಿಸುವುದಿಲ್ಲ ಎಂದು ಅವರು ಹೇಳಿದರು.
ಸಾವಿರಾರು ಕೋಟಿ ರುಪಾಯಿ ಹೊಂದಿದ್ದ ನಿರ್ಮಾಪಕ ಈಗ ಯಾವ ಸ್ಥಿತಿಯಲ್ಲಿ ಇದ್ದಾನೆ. ಅದೇ ಸಾವಿರಾರು ಕೋಟಿ ಹೊಂದಿದ್ದ ರಾಜಕಾರಣಿ ಕನ್ನಡ ಸಿನಿಮಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಕೆಲಸ ಮಾಡಿದ್ದಾರಾ ಎಂಬುದು ಪ್ರಶ್ನೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಿನಿಮಾದವರು ಮತ್ತು ರಾಜಕಾರಣಿಗಳಿಗೆ ಅದ್ಭುತ ನಂಟಿದೆ. ಅವರು ಪಾಲ್ಗೊಳ್ಳುತ್ತಾರೆ. 20 ವರ್ಷದಿಂದ ಸಿನಿಮಾ ನಗರಿ ಮಾಡಿ ಎಂಬ ನಮ್ಮ ಬೇಡಿಕೆ ಈಡೇರಿಲ್ಲ. ನಮ್ಮವರು ಸಿನಿಮಾ ಇಂಡಸ್ಟ್ರಿಗೆ ಬಯ್ಯುವುದು ಬಿಟ್ಟು ಬೇರೆ ಏನು ಮಾಡಿದ್ದಾರೆ. 3 ವರ್ಷದಿಂದ ಸಬ್ಸಿಡಿ ಕೊಟ್ಟಿಲ್ಲ, ಪ್ರಶಸ್ತಿ ಕಾರ್ಯಕ್ರಮಗಳನ್ನು ನಡೆಸಿಲ್ಲ ಎಂದು ಹರಿಹಾಯ್ದರು.
ಕಲಾವಿದರ ಕ್ಷಮೆಯಾಚಿಸಿ: ಬಿಜೆಪಿ ಆಗ್ರಹ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಟ್ ಮತ್ತು ಬೋಲ್ಟ್ ಟೈಟ್ ಮಾಡುತ್ತೇನೆ ಎನ್ನುವ ಮೂಲಕ ಕಲಾವಿದರಿಗೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಅವರು ಕಲಾವಿದರ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರು ಹಿಂದೆ ಶಾಸಕರಿಗೆ ತಗ್ಗಿ-ಬಗ್ಗಿ ನಡೆಯಬೇಕೆಂದು ಹೇಳಿದ್ದರು. ಆ ಚಾಳಿಯನ್ನೇ ಮುಂದುವರಿಸಿ ಈಗ ಸಿನಿಮಾದವರಿಗೆ ಎಂದಿದ್ದಾರೆ. ಇವರು ಚಿತ್ರೋತ್ಸವಕ್ಕೆ ಯಾವುದೇ ಕಲಾವಿದರನ್ನು ಆಹ್ವಾನಿಸಿಲ್ಲ. ಕಲಾವಿದರಿಗೆ ಧಮಕಿ ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಕಲಾವಿದರು ಕಾಂಗ್ರೆಸ್ ಪಕ್ಷದ ಗುಲಾಮರಲ್ಲ. ಇವರ ಆಶೀರ್ವಾದ ಪಡೆದು ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ ಎಂದರು.
ಮೊದಲು ಸಚಿವ ರಾಜಣ್ಣ ಸೇರಿದಂತೆ ಇವರಿಗೆ ವಿರೋಧ ಮಾಡುತ್ತಿರುವವರಿಗೆ ನಟ್ ಮತ್ತು ಬೋಲ್ಟ್ ಸರಿ ಮಾಡಲಿ. ಧಮಕಿ ಹಾಕುವುದು, ಗೂಂಡಾಗಿರಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಸಿನಿಮಾ ರಂಗಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ನೆರವು ನೀಡಿತ್ತು. ಇಂದು ಅಂಬರೀಶ್ ಅವರು ಇದ್ದಿದ್ದರೆ ಸರಿಯಾಗಿ ಉತ್ತರ ನೀಡುತ್ತಿದ್ದರು. ಸಿನಿಮಾ ರಂಗದವರು ಈ ಹೇಳಿಕೆಯನ್ನು ಖಂಡಿಸಬೇಕು ಎಂದು ಹೇಳಿದರು.
ಛಲವಾದಿ ಖಂಡನೆ:
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಂದು ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಅವರಿಗೆ ಪ್ರೋತ್ಸಾಹ ನೀಡಬೇಕು. ಅದನ್ನು ಬಿಟ್ಟು ನಟ್ಟು-ಬೋಲ್ಟು ಟೈಟ್ ಮಾಡುತ್ತೇನೆ ಎಂಬ ಶಿವಕುಮಾರ್ ಹೇಳಿಕೆ ಖಂಡನೀಯ. ಇಂತಹ ಹೇಳಿಕೆ ಚಿತ್ರರಂಗದ ಬಗ್ಗೆ ಇವರಿಗೆ ಯಾವ ರೀತಿಯ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ. ಚಿತ್ರರಂಗವನ್ನು ದಮನ ಮಾಡಲು ಸರ್ಕಾರ ಮುಂದಾಗಬಾರದು. ಕಲಾವಿದರಿಗೆ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು.
ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ?: ಜಗ್ಗೇಶ್
‘ಸಾವಿನ ಅಂಚಿನಲ್ಲಿರುವ ಚಿತ್ರರಂಗಕ್ಕೆ ಬೋಲ್ಟ್ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಕಲಾವಿದರ ಸಂಘ ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ. ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ’ ಎಂದು ನಟ, ರಾಜ್ಯಸಭಾ ಸಂಸದ ಜಗ್ಗೇಶ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು, ‘7 ಗಂಟೆಯ ಕಾರ್ಯಕ್ರಮಕ್ಕೆ ನನಗೆ 6 ಗಂಟೆಗೆ ಆಹ್ವಾನ ಪತ್ರಿಕೆ ತಲುಪಿದೆ. ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ, ಸಂವಾದವಿಲ್ಲ. ಕಲಾವಿದರ ಸಂಘವೇ ಕಣ್ಮರೆಯಾಗಿದೆ. ಕಲಾವಿದರು ಒಟ್ಟುಗೂಡಲೆಂದೇ ಡಾ। ರಾಜ್‌ಕುಮಾರ್ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯವೆಂದರೆ ಅದು ಇಂದು ನಿಷ್ಕ್ರಿಯಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಕಮಿಟಿ ಮಾಡಿ. ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಇರಲಿ. ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಮಾಡಿ. ನಿಮಗೆ ದಿನಾ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ’ ಎಂದು ಅವರು ಹೇಳಿದ್ದಾರೆ.
ನಟ್ಟು- ಬೋಲ್ಟು ಟೈಟ್ ಮಾಡುವ ಆಟ ನಡಿಯೋದಿಲ್ಲ: ಜೋಶಿ ಕಿಡಿ
ರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆ, ಧಮ್ಕಿ ರಾಜಕೀಯ, ನಟ್ಟು- ಬೋಲ್ಟು ಟೈಟ್ ಮಾಡುವ ಆಟ ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಟ್ಟು- ಬೋಲ್ಟ್ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿರುವ ಸಚಿವರು, ಉಪಮುಖ್ಯಮಂತ್ರಿ ಡಿಕೆಶಿ ಅವರೇ ಕಲಾವಿದರು ಎಂದಿಗೂ ಕಲಾವಿದರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕನ್ನಡ ನಾಡು ಮತ್ತು ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಚಲನಚಿತ್ರಗಳಿಗೆ ಅನುಮತಿ ಕೊಡದೇ ಆಟ ಆಡಿಸುವ ಧಮ್ಕಿ ಹಾಕುವುದು ಯಾವ ರಾಜಕಾರಣ. ಸಿನಿಮಾ ಪೆಟ್ಟಿಗೆ ಹಿಡಿದು ನಿಮ್ಮ ಊರಿನಲ್ಲಿ ಸಿನಿಮಾ ತೋರಿಸಿಯೇ ನೀವು ಮುಂದೆ ಬಂದಿರುವುದು ಎಂದು ನೀವೇ ಹೇಳಿ, ಇದೀಗ ದರ್ಪದಿಂದ ಮೆರೆಯೋದನ್ನು ನಿಲ್ಲಿಸಿ. ರಾಜ್ಯದ ಜನರೇ ನಿಮ್ಮ ನಟ್ಟು- ಬೋಲ್ಟ್ ಟೈಟ್ ಮಾಡುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.